ADVERTISEMENT

ಚನ್ನಕೇಶವ ದೇಗುಲದಲ್ಲಿ ಕನ್ನಡ ಡಿಂಡಿಮ

ಬೇಲೂರು: 1952ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ

ಪ್ರಜಾವಾಣಿ ವಿಶೇಷ
Published 28 ಜನವರಿ 2015, 10:35 IST
Last Updated 28 ಜನವರಿ 2015, 10:35 IST

ಬೇಲೂರು: 1952ರಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ನೀಡಿದ್ದು ಹಾಸನ ಜಿಲ್ಲೆಯ ಬೇಲೂರು. ಇಲ್ಲಿ ನಡೆದ 35ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶಿ.ಚ. ನಂದೀಮಠ ವಹಿಸಿದ್ದರು.

63 ವರ್ಷಗಳ ಹಿಂದೆ ಬೇಲೂರಿನಲ್ಲಿ ನಡೆದ ಸಮ್ಮೇಳನ ಹಾಸನ ಜಿಲ್ಲೆಯ 2ನೇ ಸಾಹಿತ್ಯ ಸಮ್ಮೇಳನವಾಗಿದೆ. ಅಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತಿಗಳ ಸಂಖ್ಯೆ ಕೇವಲ 300.

ಚನ್ನಕೇಶವ ದೇವಾಲಯ ಒಳ ಆವರಣದ ಆನೆ ಬಾಗಿಲಿನ ಬಳಿ ಸಮ್ಮೇಳನ ಆಯೋಜಿಸಲಾಗಿತ್ತು. ಅಂದು ಸಮ್ಮೇಳನದಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆಯಿತ್ತು. ಸಮ್ಮೇಳನ ಸಾಹಿತಿಗಳಿಗಷ್ಟೇ ಸೀಮಿತವಾಗಿತ್ತು. ಚನ್ನಕೇಶವ ದೇಗುಲದ ಕೈಸಾಲೆ ಮಂಟಪದಲ್ಲಿ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿತ್ತಾದರೂ ಅಂದಿನ ಬೇಲೂರು ಶಾಸಕ ಬೋರಣ್ಣಗೌಡ, ಪುರಸಭೆ ಅಧ್ಯಕ್ಷರಾಗಿದ್ದ ಎಸ್‌.ಆರ್‌. ಅಶ್ಥತ್‌, ಪ್ರಮುಖರಾಗಿದ್ದ ಗುಂಡಶೆಟ್ರು, ಚಿದಂಬರಶೆಟ್ರು, ಮೊಗಣ್ಣಗೌಡ ಮತ್ತು ತಿಪ್ಪಯ್ಯಶೆಟ್ಟರು ಸಮ್ಮೇಳನದ ಮುಂದಾಳತ್ವ ವಹಿಸಿದ್ದರು.

ರಾತ್ರಿ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬೇಲೂರು ಸಂಘದ ನೇತೃತ್ವದಲ್ಲಿ ‘ಸಾಮ್ರಾಟ್‌ ಷಹಜಹಾನ್‌’ ಎಂಬ ನಾಟಕ ಅಭಿನಯವೂ ನಡೆದಿತ್ತು. ಉಪಾದ್ಯ ಕೃಷ್ಣಮೂರ್ತಿ, ಕೇರ್‌ ಟೇಕರ್‌ ರಾಮರಾವ್‌, ಗೋಪಾಲರಾವ್‌, ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ನಾಟಕದ ಮೇಷ್ಟ್ರಾಗಿದ್ದ ಎಂ.ವಿ. ಸುಬ್ಬಣ್ಣ ಸೇರಿದಂತೆ ಹಲವರು ನಾಟಕದ ಪಾತ್ರಧಾರಿಗಳಾಗಿದ್ದರು ಎಂದು ಇಲ್ಲಿನ ಸಾಹಿತಿ ಬೇಲೂರು ಕೃಷ್ಣಮೂರ್ತಿ ‘ಪ್ರಜಾವಾಣಿ’ಯೊಂದಿಗೆ ನೆನಪು ಮತ್ತು ಅನುಭವ ಹಂಚಿಕೊಂಡರು.ಆಗಿನ್ನೂ ಬೇಲೂರಿಗೆ ಬಂದ ಹೊಸದು ನಾಟಕದ ಪಾತ್ರದಾರಿಗಳಿಗೆ ಮೇಕಪ್ಪನ್ನೂ ತಾವೇ  ಮಾಡಿದ್ದಾಗಿ ಅವರು ಹೇಳಿದರು.

1952ರ ಮೇ 16, 17 ಮತ್ತು 18ರಂದು ಬೇಲೂರಿನಲ್ಲಿ 35ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ‘ಕನ್ನಡ ಮಾತಾಡುವವರನ್ನೆಲ್ಲ ಒಂದೇ ಆಡಳಿತದಲ್ಲಿ ತರದ ಹೊರತು ಅವರ ಕಲ್ಯಾಣವಾಗುವುದಿಲ್ಲ. ಹಾಗೂ ಕರ್ನಾಟಕದಿಂದ ಭಾರತಕ್ಕೆ ಸಲ್ಲಬೇಕಾದ ಸೇವೆ ಸಲ್ಲುವುದಿಲ್ಲ. ನಾವು ಬೇರೆ ಅವರು ಬೇರೆ ಎಂಬ ಭಾವನೆ ಅಳಿಸಬೇಕು. ಕನ್ನಡಿಗರೆಲ್ಲರೂ ಒಂದುಗೂಡಬೇಕು. ಹೃದಯ ಬೆರೆಯಬೇಕು ವಿಚಾರ ಸರಣಿ ಒಂದಾಗಬೇಕು’ ಎಂಬ ಮಾತನ್ನು ನಂದೀಮಠ ಅವರು 63 ವರ್ಷಗಳ ಹಿಂದೆಯೇ ಹೇಳಿದ್ದರು.

‘ಬಹುಕಾಲದಿಂದಲೂ ಗೋವಾ ಪ್ರಾಂತವೂ ಕನ್ನಡನಾಡಿನ ಅಂಗವಾಗಿದೆ. ಕದಂಬರು, ಚಾಲುಕ್ಯರು, ವಿಜಯನಗರ ಅರಸರು ಮೊದಲಾದ ಕನ್ನಡ ಅರಸು ಮನೆತನದವರು ಇಲ್ಲಿ ರಾಜ್ಯ ಆಳಿದರು.

ಆಗ ಅಲ್ಲಿಯ ಜನರ ಭಾಷೆ ಕನ್ನಡವೇ ಆಗಿತ್ತು.  ಅಲ್ಲಿಯ ಶಿಲಾಲಿಪಿಗಳು, ಪುರಾತನ ಗ್ರಂಥಗಳು, ಸಾರಸ್ವತ ಬ್ರಾಹ್ಮಣರ ಕುಲದೇವತೆಗಳ ದೇವಾಲಯಗಳಲ್ಲಿ ಇಟ್ಟ 4– 5 ನೂರು ವರ್ಷಗಳ ಹಿಂದಿನ ಲೆಕ್ಕಪತ್ರಗಳು, ಇವೆಲ್ಲ ಕನ್ನಡ ಭಾಷೆ, ಕನ್ನಡ ಲಿಪಿಗಳಲ್ಲಿವೆ.

ಮೊನ್ನೆ ಮೊನ್ನೆಯವರೆಗೆ ಗೋವಾದಲ್ಲಿ ಕೊಂಕಣಿ ಭಾಷೆಯ ಲಿಪಿಯು ಕನ್ನಡವೇ ಆಗಿದ್ದಿತು’ ಎಂದು ನಂದೀಮಠ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.