ADVERTISEMENT

ಚುನಾವಣೆ ಅಕ್ರಮ ತಡೆಯಲು ಸೂಚನೆ

ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸುಗಲ್ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 7:17 IST
Last Updated 12 ಫೆಬ್ರುವರಿ 2016, 7:17 IST

ಹಾಸನ: ‘ಫೆ. 20 ರಂದು ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ಹಾಗೂ ಅಹಿತಕರ ಘಟನೆ ಸಂಭವಿಸದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಉಮೇಶ್ ಎಚ್. ಕುಸುಗಲ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ಜಾರಿ ತಂಡದ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಸಮಾಲೋಚನೆ ನಡೆಸಿದರು.

‘ಮಾದರಿ ನೀತಿ ಸಂಹಿತೆ ತಂಡಗಳು ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕು. ಹೆಚ್ಚಿನ ಗಸ್ತು ಕೈಗೊಳ್ಳಬೇಕು. ಅಭ್ಯರ್ಥಿಯ ಕಾರ್ಯ ಚಟುವಟಿಕೆ ಮೇಲೆ ಗಮನ ಹರಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಮಾತನಾಡಿ, ‘ಪೊಲೀಸ್, ಅಬಕಾರಿ ಮತ್ತು ಕಂದಾಯ ಇಲಾಖೆ ಒಟ್ಟುಗೂಡಿ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್ ತೆರೆಯಬೇಕು. ಮತಪತ್ರಗಳ ಮುದ್ರಣಕ್ಕಾಗಿ ಪ್ರತಿ ತಾಲ್ಲೂಕಿಗೂ ಪ್ರತ್ಯೇಕ ಮುದ್ರಣಾಲಯಗಳನ್ನು ನಿಗದಿಪಡಿಸಲಾಗಿದ್ದು ಅವರೊಂದಿಗೆ ಸಂಪರ್ಕವಿರಿಸಿ ಮತಪತ್ರಗಳನ್ನು  ಮುದ್ರಿಸಿ ಮತ ಯಂತ್ರಗಳಿಗೆ ಅಳವಡಿಸುವ ಕಾರ್ಯ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ ಗುಪ್ತ ಮಾತನಾಡಿ, ‘ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ತಂಡದ ಮುಖ್ಯಸ್ಥರು ಲಿಖಿತ ದೂರು ದಾಖಲಿಸಬೇಕು’ ಎಂದರು.

ಅಬಕಾರಿ ಜಿಲ್ಲಾ ಆಯುಕ್ತ ಗೋಪಾಲಕೃಷ್ಣಗೌಡ, ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್, ಉಪವಿಭಾಗಾಧಿಕಾರಿ ವಿಜಯಾ ಮತ್ತು ಮಧುಕೇಶ್ವರ್, ತಹಶಿೀಲ್ದಾರ್ ಮಂಜುನಾಥ್ ಹಾಗೂ ಇತರರು ಸಭೆಯಲ್ಲಿ ಇದ್ದರು.

ಕಾರ್ಮಿಕರಿಗೆ ವೇತನ ಸಹಿತ ರಜೆ
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಿಮಿತ್ತ ಫೆ. 20 ರಂದು ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರ ಮತದಾರರಿಗೆ ಮತ ಚಲಾಯಿಸಲು ವೇತನ ಸಹಿತ ರಜೆ ಘೋಷಿಸಲಾಗಿದೆ. ಮತದಾನ ದಿನದಂದು ವೇತನ ಸಹಿತ ರಜೆ ಅಥವಾ ನಿರಂತರ ಕಾರ್ಯಾಚರಣೆಯುಳ್ಳ ಕಾರ್ಖಾನೆಗಳಲ್ಲಿನ ಕಾರ್ಮಿಕರಿಗೆ ಹಕ್ಕು ಚಲಾಯಿಸಲು 2 ಗಂಟೆಗಳ ಅನುಮತಿ ನೀಡುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT