ADVERTISEMENT

ಜಮೀನು ಮಂಜೂರು ವಿಳಂಬ; ರೈತರ ಆಕ್ರೋಶ

ಹೊಳೆನರಸೀಪುರ: ತಹಶೀಲ್ದಾರ್‌ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 9:45 IST
Last Updated 21 ಮಾರ್ಚ್ 2018, 9:45 IST

ಹೊಳೆನರಸೀಪುರ: ‘ತಾಲ್ಲೂಕಿನ ರೈತರು ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿಗೆ ಖಾತೆ ಮಾಡಿಕೊಡಲು ನಮೂನೆ 53ರಲ್ಲಿ ಮಂಜೂರಾತಿ ಕೋರಿ ಅರ್ಜಿ ನೀಡಿ ವರ್ಷಗಳೇ ಕಳೆದರೂ ತಹಶೀಲ್ದಾರ್‌ ವೈ.ಎಂ. ರೇಣುಕುಮಾರ್‌ ಮಂಜೂರು ಮಾಡುತ್ತಿಲ್ಲ’ ಎಂದು ಆರೋಪಿಸಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಸದಸ್ಯರು, ರೈತರು ಹಾಗೂ ಕಾಂಗ್ರೆಸ್‌ ಮುಖಂಡರು ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

‘ತಾಲ್ಲೂಕು ಆಡಳಿತ ಉದ್ದೇಶ ಪೂರ್ವಕವಾಗಿ ಸಂಬಂಧಪಟ್ಟ ವಿಭಾಗದ ಗುಮಾಸ್ತನನ್ನು ರಜೆ ಮೇಲೆ ಕಳುಹಿಸಿ ರೈತರಿಗೆ ತೊಂದರೆ ನೀಡುತ್ತಿದೆ. ವಿಧಾನಸಭೆ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಾದರೆ ಮುಂಜೂರಾತಿ ಪ್ರಕ್ರಿಯೆ ಮಾಡುವಂತಿಲ್ಲ. ಇದರಿಂದ ಬಡ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಜಮೀನು ಮುಂಜೂರಾತಿ ವಿಷಯದಲ್ಲಿ ತಾಲ್ಲೂಕು ಆಡಳಿತ ಕ್ರಮಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂಬ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ವೈ.ಎಂ. ರೇಣುಕುಮಾರ್, ‘ವಾರದೊಳಗೆ ಅರ್ಜಿಗಳನ್ನು ಗಮನಿಸಿ ಸಮಸ್ಯೆ ಬಗೆಹರಿಸಿ ಜಮೀನು ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ADVERTISEMENT

ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಪುಷ್ಪಕುಮಾರ್, ಉಪಾಧ್ಯಕ್ಷ ಸತೀಶ್, ಮಹೇಶ್, ರೈತ ಸಂಘದ ಗವಿಸ್ವಾಮಿ, ರಂಗೇಗೌಡ, ರಮೇಶ್, ಕರವೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸಾಂಭಶಿವಪ್ಪ, ತಾ.ಪಂ. ಸದಸ್ಯ ಶಿವೇಗೌಡ, ಬೋರೇಗೌಡ, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.