ADVERTISEMENT

ಜವೇನಹಳ್ಳಿ ಕೆರೆ ಸಂರಕ್ಷಣೆಗೆ ಯೋಜನೆ

₹ 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ನಗರಸಭೆ ನಿರ್ಧಾರ

ಕೆ.ಎಸ್.ಸುನಿಲ್
Published 20 ಮಾರ್ಚ್ 2017, 9:36 IST
Last Updated 20 ಮಾರ್ಚ್ 2017, 9:36 IST
ಹಾಸನದ ಜವೇನಹಳ್ಳಿ ಕೆರೆಯಲ್ಲಿ ಗಿಡ, ಗಂಟಿಗಳು ಬೆಳೆದಿರುವುದು.
ಹಾಸನದ ಜವೇನಹಳ್ಳಿ ಕೆರೆಯಲ್ಲಿ ಗಿಡ, ಗಂಟಿಗಳು ಬೆಳೆದಿರುವುದು.   

ಹಾಸನ: ನಗರದ ಸಂಗಮೇಶ ಬಡಾವಣೆಯಲ್ಲಿರುವ ಜವೇನಹಳ್ಳಿ ಕೆರೆಯನ್ನು ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಗರಸಭೆ ಮುಂದಾಗಿದೆ.
ನಾಲ್ಕು ಎಕರೆ ವಿಸ್ತಾರದ ಕೆರೆ ಜೀರ್ಣೋದ್ಧಾರಗೊಂಡರೆ ಸುತ್ತಮುತ್ತಲ ಪ್ರದೇಶದಲ್ಲಿ ಜಲದಾಹ ಕಡಿಮೆ ಆಗಲಿದೆ. ಈಗಾಗಲೇ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಕೆರೆ ಹೂಳೆತ್ತು ವುದು, ಸುತ್ತಲೂ ತಡೆಗೋಡೆ ಹಾಗೂ ಗಿಡ ಮರ ಬೆಳೆಸಲು ಯೋಜನೆ ರೂಪಿಸಲಾಗಿದೆ.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇರುವ ನಗರಸಭೆಯ ₹ 2 ಕೋಟಿ ಅನುದಾನವನ್ನು ಕಾಮಗಾರಿಗೆ ಬಳಸಿಕೊಳ್ಳಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಯೋಜನಾ ವರದಿ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದು, ಅಲ್ಲಿಂದ ಸೂಚನೆ ಬಂದ ಬಳಿಕ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ದಶಕಗಳ ಹಿಂದೆ ಜವೇನಹಳ್ಳಿ ಕೆರೆ ನೀರು ಬಳಸಿಕೊಂಡು ಸುತ್ತಮುತ್ತಲ ಜನರು ಭತ್ತ ಬೆಳೆಯುತ್ತಿದ್ದರು. ಜಾನು ವಾರು ಮತ್ತು ಜನರಿಗೆ ಜೀವನಾಡಿಯಾಗಿ ಕೆರೆ ಆಸರೆಯಾಗಿತ್ತು. ಆದರೆ ಈಗ ಕೆರೆ ಸುತ್ತಲೂ ನಗರದ ತ್ಯಾಜ್ಯ ಸುರಿಯಲಾಗಿದೆ. ಗಿಡ, ಗಂಟಿಗಳಿಂದ ಕೆಟ್ಟ ವಾಸನೆ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆರೆಯೂ ಗಿಡ, ಗಂಟಿಗಳಿಂದ ಮುಚ್ಚಿ ಹೋಗಿದೆ.

ಕೆರೆ ಜಾಗದ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಮಳೆಯ ನೀರನ್ನು ಕೆರೆಗೆ ಹರಿಯುವಂತೆ ಮಾಡಲು ಪೈಪ್ ಸಹ ಅಳವಡಿಸಲು ನಿರ್ಧರಿಸಲಾಗಿದೆ.

ನಗರದ 35 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹೇಮಾವತಿ ಜಲಾಶಯದಿಂದ 8 ಎಂಎಲ್‌ಡಿ ಮಾತ್ರ ನೀರು ಲಭ್ಯವಾಗು ತ್ತಿದೆ. ಇದರಿಂದ ಹತ್ತು ವಾರ್ಡ್‌ಗಳಿಗೆ ನೀರು ಪೂರೈಸಲು ಮಾತ್ರ ಸಾಧ್ಯ.ಯಗಚಿ ಜಲಾಶಯದಿಂದ ನಿತ್ಯ 20 ಕ್ಯುಸೆಕ್‌ ನೀರು ದೊರೆಯುತ್ತಿದ್ದು, ಇದ ರಿಂದ ಹತ್ತು ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಉಳಿದ 15 ವಾರ್ಡ್‌ಗಳಿಗೆ ನೀರು ಪೂರೈಸುವುದು ಕಷ್ಟವಾಗಿದೆ.

‘ಕೆರೆಗಳಿಗೆ ನೀರು ತುಂಬಿಸಿದರೆ, ಅಂತರ್ಜಲವೂ ಭರ್ತಿಯಾಗಿ ಸುತ್ತ ಮುತ್ತಲ ಪ್ರದೇಶದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ್‌.

*
ಜವೇನಹಳ್ಳಿ ಕೆರೆ ಜೀರ್ಣೊ ದ್ಧಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಕರೆ ಅಭಿವೃದ್ಧಿ ಪ್ರಾಧಿಕಾರ ದಿಂದ ಸೂಚನೆ ಬಂದ ತಕ್ಷಣ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
-ಎಚ್‌.ಎಸ್.ಅನಿಲ್‌ಕುಮಾರ್‌,
ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT