ADVERTISEMENT

ಜಿಲ್ಲಾಸ್ಪತ್ರೆ ಸೇವಾಸೌಲಭ್ಯ ಉತ್ತಮಪಡಿಸಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 8:44 IST
Last Updated 15 ನವೆಂಬರ್ 2017, 8:44 IST

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆ (ಹಿಮ್ಸ್) ಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಮೂಲಕ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ 55 ಹಾಸಿಗೆಗಳ ನವಜಾತ ಶಿಶುಗಳ ಚಿಕಿತ್ಸಾ ಘಟಕ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಸಂಪೂರ್ಣ ನಿಯಂತ್ರಿಸಬೇಕು. ಹಿಂದೆ 20 ಹಾಸಿಗೆಗಳ ಎನ್.ಐ.ಸಿ.ಯು ಲಭ್ಯವಿದ್ದು, ಶಿಶುಗಳ ಪ್ರಮಾಣ ಹೆಚ್ಚಳಗೊಂಡು ಸೋಂಕು ಹರಡುವ ಸಾಧ್ಯತೆ ಅಧಿಕವಾಗಿತ್ತು. ಈಗ ಚಿಕಿತ್ಸಾ ಘಟಕದ ಸಾಮರ್ಥ್ಯ 55 ಹಾಸಿಗೆಗೆ ಏರಿದೆ. ಗುಣಮಟ್ಟದ ಚಿಕಿತ್ಸೆ ಮಕ್ಕಳಿಗೆ ಸಿಗಲು ಸಾಧ್ಯವಾಗಿದೆ. ಈ ಕೇಂದ್ರಕ್ಕೆ ಹೆಚ್ಚುವರಿ ಶುಶ್ರೂಷಕಿಯರನ್ನು ಒದಗಿಸಲಾಗುವುದು ಎಂದರು.

ಗರ್ಭಿಣಿ, ಬಾಣಂತಿಯರ ತೀವ್ರ ನಿಗಾ ಘಟಕದ ಸಾಮರ್ಥ್ಯ ಹೆಚ್ಚಿಸುವ ಅಗತ್ಯವಿದೆ. ಪ್ರಸವ ವೇದನೆ ಅನುಭವಿಸುತ್ತಿರುವ ಮಹಿಳೆಯರ ಚಿಕಿತ್ಸೆಗೆ ವಿಶೇಷ ವಿನ್ಯಾಸದ ಕೊಠಡಿ ಗಳು ಸಿದ್ದವಾಗಬೇಕು, ಆಕರ್ಷಕ ಚಿತ್ರಗಳು, ಮಾಹಿತಿ ಫಲಕಗಳ ಅಳವಡಿಸಿ ಎಂದು ಸಲಹೆ ನೀಡಿದರು.

ADVERTISEMENT

ಅನೇಕ ಸಂಸ್ಥೆಗಳು ಸಹ ಜಿಲ್ಲಾ ಆಸ್ಪತ್ರೆಯಲ್ಲಿನ ಸೌಕರ್ಯ ಅಭಿವೃದ್ಧಿಗೆ ಕೈ ಜೋಡಿಸುತ್ತಿವೆ. ಎಚ್.ಪಿ.ಸಿ.ಎಲ್ ಕೂಡ ವೆಂಟಿಲೇಟರ್‌ಗಳು, ವಾತಾವರಣ ಬೆಚ್ಚಗಾಗಿಸುವ ಸಾಧನಗಳನ್ನು ಕೊಡುಗೆಯಾಗಿ ನೀಡಿವೆ ಎಂದು ರೋಹಿಣಿ ಹೇಳಿದರು.

ಹಿಮ್ಸ್ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್  ಜಿಲ್ಲಾಸ್ಪತ್ರೆ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ ಅನ್ನು ₹ 6.5 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ. ದಿನಕ್ಕೆ ₹ 10 ಶುಲ್ಕ ತೆಗೆದುಕೊಳ್ಳಲಾಗುತ್ತಿದೆ ಎಂದ ಅವರು, ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದ ರೋಗಿಗಳ ಸಂಖ್ಯೆ ಶೇ 25ರಷ್ಟು ಹೆಚ್ಚಳವಾಗಿದೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ, ಆರ್.ಸಿ. ಎಚ್. ಅಧಿಕಾರಿ ಡಾ. ಜನಾರ್ಧನ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಮಕ್ಕಳ ತಜ್ಞರಾದ ಡಾ. ಕುಮಾರ್, ಡಾ. ಮನುಪ್ರಕಾಶ್ ಹಾಜರಿದ್ದರು.

ಮಕ್ಕಳ ಪಾಲನಾ ಕೇಂದ್ರ ಉದ್ಘಾಟನೆ
ಹಾಸನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಆವರಣದಲ್ಲಿ ಶಿಶು ಮತ್ತು ಮಕ್ಕಳ ಪಾಲನಾ (ಡೇ ಕೇರ್) ಕೇಂದ್ರವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.
ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಸ್ಥಾನಿಯ ವೈದ್ಯಾಧಿಕಾರಿ ಡಾ. ವಿ.ಆರ್. ಕೃಷ್ಣಮೂರ್ತಿ ಇದ್ದರು. ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾರ್ತಾಧಿಕಾರಿ ವಿನೋದ್ ಚಂದ್ರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.