ADVERTISEMENT

‘ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿತ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:02 IST
Last Updated 14 ಜುಲೈ 2017, 9:02 IST

ಹಾಸನ: ‘ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು’ ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು. ಜಿಲ್ಲೆಯ ರೈತರು ಬೆಳೆದ ಆಲೂಗೆಡ್ಡೆ ಸಂಪೂರ್ಣ ನಾಶವಾಗಿದೆ. 

ದೃಢೀಕೃತ ಆಲೂಗೆಡ್ಡೆ  ಬಿತ್ತನೆ ಬೀಜವನ್ನು ಪಂಜಾಬ್‌ನಿಂದ ತರಿಸಲಾಗಿದೆಯೋ ಅಥವಾ ಮಧ್ಯವರ್ತಿಗಳಿಂದ ಖರೀದಿಸಲಾಗಿದೆಯೋ ಗೊತ್ತಿಲ್ಲ. ದರ ನಿಗದಿ ಸೇರಿದಂತೆ ಎಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೆ ತಪ್ಪು ಎನ್ನುತ್ತಾರೆ. ಜಿಲ್ಲಾ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಎಲ್ಲರನ್ನು ಒಂದು ಕುಟುಂಬದ ರೀತಿಯಲ್ಲಿ ನೋಡಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಮರ್ಪಕ ಮಳೆ ಇಲ್ಲದೆ ತೆಂಗು, ರಾಗಿ, ಭತ್ತ ಹಾಗೂ ಇತರೆ ಬೆಳೆಗಳು ಕಮರುತ್ತಿದೆ. ಇದನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದರೆ ಆರ್ಥಿಕ ಶಿಸ್ತು ನಾಶವಾಗಲಿದೆ. 

ADVERTISEMENT

ಗರಿಷ್ಟ ಬೆಲೆಯ ನೋಟು ರದ್ದತಿಯಿಂದ ಸಾಕಷ್ಟು ಕಾನೂನುಗಳು ಬದಲಾಗಿವೆ. ಹಾಗಾಗಿ ಸಾಲ ಮನ್ನಾ ಮಾಡುವುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಸ್ತುತ ರಾಜಕೀಯ ರಾಜಕೀಯ ಸಾಕಷ್ಟು ಹದಗೆಟ್ಟಿದೆ.  ಬಹಿರಂಗವಾಗಿ ಹೇಳಲು ಆಗುವುದಿಲ್ಲ.  ಕರಾವಳಿ ಕಲಹ ರಾಜಕೀಯವೋ,  ಆಡಳಿತದ ವೈಫಲ್ಯವೋ ಗೊತ್ತಿಲ್ಲ.  ಇದರಿಂದ ಮನಸ್ಸಿಗೆ ಬೇಸರವಾಗಿದೆ. ಅಶ್ಲೀಲ ಪದ ಬಳಕೆಯ ಕೆಸರೆರಚಾಟ ಒಳಿತಲ್ಲ.  ನಾಗರಿಕ ಸಮಾಜದಲ್ಲಿ ಗೌರವ ತರುವಂತಹುದಲ್ಲ. ಇದೊಂದು ಅಸಭ್ಯವಾದ ವರ್ತನೆ.  ಶಾಂತಿ ಸ್ಥಾಪಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಕರೆ ನೀಡಿದರು.

ಕಾವೇರಿ ವಿಚಾರವಾಗಿ ಹೊಸ ಅನುಭವಿ ತಂಡ ರಚನೆ ಮಾಡಲಾಗಿದೆ. ಅವರ ಆಲೋಚನೆಯಲ್ಲಿ ಯಾವ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ನೋಡೋಣ ಎಂದು ನುಡಿದರು. ‘ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ ಭೇಟಿ ನೀಡಿದ್ದನ್ನು ವೈಭವೀಕರಿಸಲಾಗುತ್ತಿದೆ.

ಆದರೆ ನಾನು 1972ರಲ್ಲಿಯೇ ಇಸ್ರೇಲ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೆ. ಅಲ್ಲಿನ ರೈತರು ಒಂದು ಗಿಡದಲ್ಲಿ 30–35 ಕೆ.ಜಿ. ಟೊಮೆಟೊ ಬೆಳೆಯುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ನನ್ನ ಆತ್ಮಚರಿತ್ರೆ ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ಪ್ರಕಟವಾಗಲಿದೆ. ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅಧಿಕಾರ ಅವಧಿಯನ್ನು ಮಾತ್ರ ಪ್ರಸ್ತಾಪಿಸಲಾಗುತ್ತಿದೆ. ಈಗಾಗಲೇ 390 ಪುಟಗಳಾಗಿವೆ. 500 ಪುಟಗಳಿಗೆ ಸೀಮಿತಗೊಳಿಸಲಾಗುವುದು. ಪ್ರಾಧ್ಯಾಪಕರೊಬ್ಬರು ಅಮೆರಿಕಕ್ಕೆ ಹೋಗಿರುವುದರಿಂದ ಪ್ರಕಟವಾಗುವುದು ವಿಳಂಬವಾಗುತ್ತಿದೆ’ ಎಂದು  ಪ್ರಶ್ನೆಗೆ ಉತ್ತರಿಸಿದರು. ಗೋಷ್ಠಿಯಲ್ಲಿ ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.