ADVERTISEMENT

ಜಿಲ್ಲೆಯಲ್ಲಿ ಮಳೆ ಚುರುಕು: ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:29 IST
Last Updated 11 ಸೆಪ್ಟೆಂಬರ್ 2017, 8:29 IST
ಜಾವಗಲ್‌ ಸಮೀಪದ ಹಿರೇಕಟ್ಟೆ ವಡ್ಡು ತುಂಬಿದ್ದು, ಕೋಡಿ ಬೀಳಲು 2 ಅಡಿ ಬಾಕಿ ಇದೆ (ಎಡಚಿತ್ರ). ಅರಸೀಕೆರೆ ತಾಲ್ಲೂಕು ಮಾಡಾಳು ಸಮೀಪ ಯಾದವರಹಟ್ಟಿ ಹೊಲದಲ್ಲಿ ನಿಂತಿರುವ ನೀರು
ಜಾವಗಲ್‌ ಸಮೀಪದ ಹಿರೇಕಟ್ಟೆ ವಡ್ಡು ತುಂಬಿದ್ದು, ಕೋಡಿ ಬೀಳಲು 2 ಅಡಿ ಬಾಕಿ ಇದೆ (ಎಡಚಿತ್ರ). ಅರಸೀಕೆರೆ ತಾಲ್ಲೂಕು ಮಾಡಾಳು ಸಮೀಪ ಯಾದವರಹಟ್ಟಿ ಹೊಲದಲ್ಲಿ ನಿಂತಿರುವ ನೀರು   

ಅರಸೀಕೆರೆ: ತಾಲ್ಲೂಕಿನಲ್ಲಿ ಐದಾರು ದಿನಗಳಿಂದ ಬೀಳುತ್ತಿರುವ ಮಳೆ ಭಾನುವಾರವೂ ಮುಂದುವರಿದಿದ್ದು, ಹೊಲ–ತೋಟಗಳ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮುಂಗಾರು ನಂತರದ ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದ ಕಾರಣ ರೈತರು ಚಿಂತೆಗೀಡಾಗಿದ್ದರು. 20 ದಿನಗಳ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಗೆ ರಾಗಿ ಬಿತ್ತನೆ ಮಾಡಿದ್ದರು. ಮಳೆ ಇಲ್ಲದೆ ರಾಗಿ ಬೆಳೆ ಬಾಡಿಹೋಗುತ್ತಿತ್ತು. ಆದರೆ, ಈಗ ಬೀಳುತ್ತಿರುವ ಮಳೆಗೆ ರಾಗಿ ಹಸಿರಿನಿಂದ ನಳನಳಿಸುತ್ತಿದೆ.

ನೀರಿಲ್ಲದೆ ಖಾಲಿ ಇದ್ದ ಕೆರೆ–ಕಟ್ಟೆಗಳು, ಗುಂಡಿಗಳಲ್ಲಿ ತುಂಬಿಕೊಂಡಿದೆ. ಜಾನುವಾರುಗಳ ಕುಡಿಯುವ ನೀರಿಗೆ ಈಗ ತೊಂದರೆ ಇಲ್ಲದಂತಾಗಿದೆ ಎಂದು ರೈತ ಶಿವಲಿಂಗಪ್ಪ ಸಂತಸದಿಂದ ಹೇಳಿದರು.

ADVERTISEMENT

ಜಾವಗಲ್‌ ವರದಿ: ಇಲ್ಲಿನ ಸುತ್ತಮುತ್ತ ಶನಿವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ಜಾವಗಲ್‌ ಜನತೆಯ ಮುಖದಲ್ಲಿ ಹರ್ಷ ಮೂಡಿದೆ.

ಕುಸಿದು ಬಿದ್ದ ಪಾಲಿಹೌಸ್‌; ಗದ್ದೆಗಳಲ್ಲಿ ನಿಂತ ಮಳೆ ನೀರು
ಹಳೇಬೀಡು: ಹೋಬಳಿಯ ಅಲ್ಲಲ್ಲಿ ಶನಿವಾರ ಸಂಜೆ ಬಿದ್ದ ಮಳೆಗೆ ರಾಜಗೆರೆ ಗ್ರಾಮದ ಪಾಲಿಹೌಸ್‌ (ನರ್ಸರಿ) ಕುಸಿದು ಬಿದ್ದಿದೆ. ತಗ್ಗಿನ ಜಮೀನುಗಳಲ್ಲಿ ಬೆಳವಣಿಗೆ ಹಂತದ ಬೆಳೆ ಮುಳುಗುವಂತೆ ಮಳೆ ನೀರು ನಿಂತಿದೆ.

ರಾಜಗೆರೆ ಗ್ರಾಮದ ಪರ್ವತೇಗೌಡ ಎಂಬುವವರ ಪಾಲಿಹೌಸ್‌ ನೆಲ ಕಚ್ಚಿದೆ. ಮೂರು ತಿಂಗಳ ಹಿಂದೆ ಮಳೆ ಬಿದ್ದಾಗ ಪಾಲಿಹೌಸ್‌ ಕುಸಿದು ಬಿದ್ದಿತ್ತು. ಸಾವಿರಾರು ರೂಪಾಯಿ ವೆಚ್ಚಮಾಡಿ ದುರಸ್ತಿ ಮಾಡಿಸಿದ್ದರು. ಈಗ ಮತ್ತೊಮ್ಮೆ ಜಖಂ ಆಗಿದೆ.

ಘಟ್ಟದಹಳ್ಳಿ ಹಾಗೂ ಗೋಣಿ ಸೋಮನಹಳ್ಳಿ ಗ್ರಾಮಗಳಲ್ಲಿ ತಗ್ಗಿನ ಗದ್ದೆಗಳಲ್ಲಿ ಮಳೆ ನೀರು ನಿಂತಿದೆ. ಬೆಳೆ ಕೊಳೆತು ಹೋದರೂ ಚಿಂತೆಯಿಲ್ಲ. ಅಪರೂಪಕ್ಕೆ ಮಳೆ ಬರುತ್ತಿದೆ. ಕೆರೆ– ಕಟ್ಟೆ ತುಂಬಿಸಿ ಅಂತರ್ಜಲ ಹೆಚ್ಚಿದರೆ ಬದುಕು ನಡೆಸಲು ಸುಲಭವಾಗುತ್ತದೆ ಎಂದು ರೈತ ಗೋಣಿಸೋಮನಹಳ್ಳಿ ಶಿವಕುಮಾರ್‌ ತಿಳಿಸಿದರು.

ಪಟ್ಟಣದಲ್ಲಿ ಉತ್ತಮ ಮಳೆ
ಚನ್ನರಾಯಪಟ್ಟಣ: ಪಟ್ಟಣ ಸೇರಿ ತಾಲ್ಲೂಕಿನ ಅನೇಕ ಕಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ಪಟ್ಟಣದಲ್ಲಿ ಶನಿವಾರ ರಾತ್ರಿ 11 ಗಂಟೆ ನಂತರ ಆರಂಭವಾದ ಜಿಟಿ ಜಿಟಿ ಮಳೆ ಭಾನುವಾರ ಮುಂಜಾನೆ 5.30 ತನಕ ಸುರಿಯಿತು. ಇದೇ ರೀತಿ ತಾಲ್ಲೂಕಿನ ಅನೇಕ ಕಡೆಯಲ್ಲಿಯೂ ಮಳೆಯಾಗಿದ್ದು, ಕಟ್ಟೆಗಳಲ್ಲಿ ನೀರು ನಿಂತಿದೆ

ಮಳೆಯಿಂದ ತಂಪು ವಾತಾವರಣ ಸೃಷ್ಠಿಯಾಗಿದೆ. ಮಳೆಯ ವಿವರ: ಹಿರೀಸಾವೆ (73 ಮಿಮೀ), ನುಗ್ಗೇಹಳ್ಳಿ (70.6), ಶ್ರವಣಬೆಳಗೊಳ (47.7), ಬಾಗೂರು (47,1), ಕಸಬಾ (46.6), ಉದಯಪುರ (40.8 ಮಿಮೀ) ಮಳೆಯಾದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.