ADVERTISEMENT

ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಾನಕಿ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 6:46 IST
Last Updated 27 ಮಾರ್ಚ್ 2017, 6:46 IST
ಹಾಸನ:  ಮಹಿಳೆಯರು ಯಾವುದೇ ಟೀಕೆಗಳು ಎದುರಾದರೂ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಕಿವಿ ಮಾತು  ಹೇಳಿದರು. 
 
ರಾಜ್ಯ ಗೃಹ ಮಂಡಳಿ, ಹಾಸನಾಂಬ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದರ್ಪಣ ಪತ್ರಿಕಾ ಬಳಗದ ಆಶ್ರಯದಲ್ಲಿ ಗಣಪತಿ ದೇವಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. 
 
ಮಹಿಳೆಯರನ್ನು ಎಲ್ಲರು ಗೌರವದಿಂದ ಕಾಣಬೇಕು. ಪ್ರಸ್ತುತ ಮನೆಯಲ್ಲಿ ಕೆಲಸಗಳನ್ನು ಹಂಚಿಕೊಂಡು ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂದು ಮಹಿಳೆಯರ ಸಾಧನೆಗೆ ಕುಟುಂಬ ಸಹಕಾರ ನೀಡುತ್ತಿದೆ. ಮಹಿಳೆಯರು ಸುಶಿಕ್ಷಿತರಾಗಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ಆರ್ಥಿಕ ಸ್ವಾವಲಂಭನೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.  
 
5 ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಬಿ.ಎಚ್‌.ಕಾವ್ಯಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನಸ್ಸು ಮಾಡಿದರೆ ಹೆಣ್ಣು ಏನು ಬೇಕಾದರೂ ಸಾಧಿಸಬಹುದು. ಉತ್ತಮ ಶಿಕ್ಷಣ ಗಳಿಸುವ ಮೂಲಕ ತಮ್ಮಲ್ಲಿ ಆತ್ಮಶಕ್ತಿ ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಹೆಣ್ಣು ಅಬಲೆಯಲ್ಲ ಸಬಲೆ. ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. 
 
ಮಣಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬಿ.ಕೆ.ಸೌಮ್ಯಮಣಿ ಮಾತನಾಡಿ, ಇಂದು ಮಹಿಳೆ ಪ್ರತಿ ಕ್ಷೇತ್ರದಲ್ಲೂ ತನ್ನದೆ ಹೆಸರು ಮತ್ತು ಕೀರ್ತಿ ಸಂಪಾದಿಸಿದ್ದಾಳೆ. ಸಮಾಜದಲ್ಲಿ ಸ್ತ್ರೀ ಹಾಗೂ ಪುರುಷರು ಸಮಾನರೆಂಬ ಹೇಳಿಕೆ ಕೇವಲ ಮೌಖಿಕವಾಗಿದೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗಳ ಪ್ರಮಾಣ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.
 
5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಟಿ.ಕೆ.ಪ್ರಿಯಾಂಕಾ, ಹಾಸನಾಂಬ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲ್‌,  ಚಿಕ್ಕಮಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ಪೂರ್ಣಿಮಾ, ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕರು ಎಚ್‌.ಎಂ.ರೇಖಾಬಾಯಿ.  ರಾಜ್ಯ ಗೃಹ ಮಂಡಳಿ ನಿರ್ದೇಶಕಿ ವಾಣಿ ವೆಂಕಟೇಶ್ ಇದ್ದರು.
 
ಮಾಡುವ ಕೆಲಸಗಳನ್ನು  ಪ್ರೀತಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಅಧಿಕಾರ, ಗೌರವಗಳು ತಾವಾಗಿಯೇ ದಕ್ಕುತ್ತವೆ.
ಕೆ.ಎಂ.ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT