ADVERTISEMENT

ದೇಶ ಪ್ರೇಮ ಮೆರೆಯಲು ವೇದಿಕೆ ಕಲ್ಪಿಸಿಕೊಡಿ

ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 10:52 IST
Last Updated 23 ಜನವರಿ 2017, 10:52 IST
ದೇಶ ಪ್ರೇಮ ಮೆರೆಯಲು ವೇದಿಕೆ ಕಲ್ಪಿಸಿಕೊಡಿ
ದೇಶ ಪ್ರೇಮ ಮೆರೆಯಲು ವೇದಿಕೆ ಕಲ್ಪಿಸಿಕೊಡಿ   

ಹಾಸನ: ‘ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಕರೆಯುವ ಜನರು ನಮ್ಮ ಸಮುದಾಯಕ್ಕೊಂದು ವೇದಿಕೆ ಕಲ್ಪಿಸಿಕೊಟ್ಟರೆ ದೇಶಪ್ರೇಮ, ಸ್ವಾಭಿಮಾನ ಎಂತಹದ್ದು ಎಂಬುದನ್ನು ಸಾಬೀತುಪಡಿಸುತ್ತೇವೆ’ ಎಂದು ಹೊಳೆನರಸೀಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಇರ್ಷಾದ್ ಹೇಳಿದರು.

ರಾಜ್ಯ ಮುಸ್ಲಿಂ ನೌಕರರ ಸಂಘದಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಪೆನ್ಷನ್ ಮೊಹಲ್ಲಾ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮುಸ್ಲಿಮರೆಂದರೆ ಕಳ್ಳರು ಎಂದು ಪರಿಗಣಿಸುವ ಪರಿಪಾಟ ಬೆಳೆದು ಬಂದಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಉರ್ದು ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಸ್ಲಿಮರಿಗೆ ಅಂಟಿರುವ ಕಳ್ಳರು ಎಂಬ ಹಣೆಪಟ್ಟಿ ಶಾಶ್ವತವಾಗಿ ಉಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲ್ಯದಿಂದಲೇ ಮಕ್ಕಳನ್ನು ದುಡಿತಕ್ಕೆ ತಳ್ಳುವ ಪೋಷಕರು ಅವರ ಭವಿಷ್ಯದ ಕುರಿತು ವಿಚಾರ ಮಾಡುವುದಿಲ್ಲ. ಎಲ್ಲರ ಬಾಯಲ್ಲೂ ಬರುವ ‘ಏಕ್‌ ದಿನ್‌ ಕಾ ಸುಲ್ತಾನ್’ ಎಂಬ ಬಿರುದಿನಿಂದ ಹೊರಬರಲು ಪ್ರಯತ್ನಿಸಬೇಕು. ಉಳಿತಾಯ, ಶಿಕ್ಷಣ, ಸಾಮಾಜಿಕ ನ್ಯಾಯದ ಕುರಿತು ಯೋಚಿಸಬೇಕು ಎಂದು ಸಲಹೆ ನೀಡಿದರು.

ದೇಶ ರಕ್ಷಣೆಗಾಗಿ ಮುಸ್ಲಿಂ ಸಮುದಾಯದ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಮಹನೀಯರ ಆದರ್ಶ ತತ್ವ ಹಾಗೂ ಬೈಬಲ್‌ನ ವಿಚಾರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ನಮ್ಮ ಅಸ್ತಿತ್ವ ಉಳಿಯಬೇಕೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪ್ರತಿಪಾದಿಸಿದರು.

ಬೆಂಗಳೂರಿನ ಪೊಲೀಸ್ ಇನ್‌ಸ್ಪೆಕ್ಟರ್‌ ಮಹ್ಮದ್ ರಫಿ ಮಾತನಾಡಿ, ಮುಸ್ಲಿಮರು ಕಳ್ಳರಾಗುವಂತೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು. ಸರ್ಕಾರ ನೀಡುವ ಸೌಲಭ್ಯಗಳು ಅರ್ಹರಿಗೆ ತಲುಪಿದ್ದರೆ ಅವರು ಸ್ವಾಭಿಮಾನದ ಜೀವನ ನಡೆಸಬಹುದಿತ್ತು. ಆದರೆ ನಮಗೆ ಆ ಅವಕಾಶ ನೀಡುತ್ತಿಲ್ಲ. ದಲಿತ ವರ್ಗಗಳಿಗಿಂತ ಮುಸ್ಲಿಮರ ಜೀವನಮಟ್ಟ ದುಸ್ಥಿತಿಯಲ್ಲಿದೆ ಎಂದು ಸರ್ಕಾರ ರಚಿಸಿದ ವರದಿ ಹೇಳಿದೆ. ಆಡಳಿತ ನಡೆಸುವ ಮುಖಂಡರಿಗೆ ಮೂಲ ಸಮಸ್ಯೆಗಳ ಗಂಭೀರತೆ ತಿಳಿಯುತ್ತಿಲ್ಲ ಎಂದು ಬೇಸರಪಟ್ಟರು.ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಆರ್. ಅನ್ವರ್ ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.