ADVERTISEMENT

ನಗರಕ್ಕೂ ಬಂತು 25 ಹೈಟೆಕ್‌ ಬಸ್‌

‘ಅಮೃತ್‌’ ಯೋಜನೆಯಲ್ಲಿ ಟಾಟಾ ಕಂಪೆನಿಯ ಬಸ್‌ ಮಂಜೂರು

ಕೆ.ಎಸ್.ಸುನಿಲ್
Published 27 ಆಗಸ್ಟ್ 2016, 9:17 IST
Last Updated 27 ಆಗಸ್ಟ್ 2016, 9:17 IST
ನಗರಕ್ಕೂ ಬಂತು 25 ಹೈಟೆಕ್‌ ಬಸ್‌
ನಗರಕ್ಕೂ ಬಂತು 25 ಹೈಟೆಕ್‌ ಬಸ್‌   

ಹಾಸನ: ಮಹಾನಗರಗಳಿಗೆ ಸೀಮಿತವಾಗಿದ್ದ ಹೈಟೆಕ್‌ ಬಸ್‌ಗಳು ಈಗ ಹಾಸನ ನಗರಕ್ಕೂ ಕಾಲಿಟ್ಟಿವೆ. ಅಮೃತ್‌ ಯೋಜನೆಯಲ್ಲಿ ಮಂಜೂರಾಗಿದ್ದ 35 ಹೈಟೆಕ್‌ ಬಸ್‌ಗಳ ಪೈಕಿ 25 ಬಸ್‌ಗಳು ಬಂದಿದ್ದು, ಸಂಚಾರ ಆರಂಭಿಸಿವೆ.

ಸಾರಿಗೆ ಸಂಸ್ಥೆಯು ಹಲವು ವರ್ಷಗಳಿಂದ ಹಳೆಯ ಸಿಟಿ ಬಸ್‌ಗಳನ್ನೇ ನಗರ ಪ್ರದೇಶಗಳಿಗೆ ಬಳಸುತ್ತಿತ್ತು. ಕೆಲವು ತೀರಾ ಹಳೆಯದಾಗಿದ್ದರಿಂದ ಆಗಾಗ್ಗೆ ಕೆಟ್ಟು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದವು. ಈಗ ಹೈಟೆಕ್‌ ಬಸ್‌ಗಳು ಸಂಚಾರ ಆರಂಭಿಸಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.

ಟಾಟಾ ಕಂಪೆನಿಯ ಪ್ರತಿ ಬಸ್‌ ಬೆಲೆ ₹ 28 ಲಕ್ಷ. ಹೈಟೆಕ್‌ ಬಸ್‌ನಲ್ಲಿ  ಹಲವು ಸೌಲಭ್ಯ ಕಲ್ಪಿಸಲಾಗಿದೆ. ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ.
ಪ್ರಯಾಣಿಕರು ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ಕೆಳಮಟ್ಟದಲ್ಲಿ ಇಡಲಾಗಿದೆ, 40 ಆಸನಗಳ ವ್ಯವಸ್ಥೆ, ಮುಂದಿನ ನಿಲ್ದಾಣದ ಬಗ್ಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತದೆ. ಒಳಗೆ ಎರಡು ಸಿಸಿಟಿವಿ ಕ್ಯಾಮೆರಾ ಹಾಗೂ ಬಸ್‌ ಹಿಂಬದಿ ಒಂದು ಕ್ಯಾಮೆರಾ ಅಳವಡಿಸಲಾಗಿದೆ.

ಎಲ್‌ಇಡಿ ಪರದೆ, ಏಳು ಗೇರ್‌ಗಳನ್ನು ಹೊಂದಿದೆ. ಅಲ್ಲದೇ ಹೊಸ ಬಸ್‌ 12 ಮೀಟರ್‌ ಚಾಸಿ, ವ್ಹೀಲ್‌ ಬೇಸ್‌ 244 ಇದೆ. ಹಳೆಯ ಬಸ್‌ಗಳಿಗೆ ಹೋಲಿಸಿದರೆ ಸ್ವಲ್ಪ ಉದ್ದ, ಹೀಗಾಗಿ ಸತ್ಯಮಂಗಲ, ಆರ್‌ಟಿಒ, ಸಂತೇಪೇಟೆ ಹಾಗೂ ಕೆಲವು ಕಡೆ ತಿರುವು ತೆಗೆದುಕೊಳ್ಳಲು ಆಗುತ್ತಿಲ್ಲ. ಆದ ಕಾರಣ ಅಲ್ಲಿಗೆ ಹಳೆಯ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ನಗರದ 9 ಮಾರ್ಗಗಳಲ್ಲಿ ಅಂದರೆ ದಾಸನಕೊಪ್ಪಲು, ವಿದ್ಯಾನಗರ, ಆರ್‌ಟಿಒ ಕಚೇರಿ, ಹನುಮಂತ ನಗರ, ಕೃಷ್ಣನಗರ, ಕಂದಲಿ, ದೇವೇಗೌಡ ನರ್ಸಿಂಗ್ ಕಾಲೇಜು, ಬುವನಹಳ್ಳಿ, ಕೆಐಡಿಬಿ ಸಿಟಿ ಬಸ್‌ ಸಂಚರಿಸುತ್ತಿವೆ. ಹೊಸದಾಗಿ ಹೇಮಾವತಿ ನಗರಕ್ಕೆ ಬಸ್‌ ಓಡಿಸುವಂತೆ ಬೇಡಿಕೆ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಮುರುಳೀಧರ ಆಚಾರ್ಯ, ‘ಪ್ರಸ್ತುತ ನಗರದಲ್ಲಿ ಹಳೆಯ 10 ಬಸ್‌ ಸೇರಿದಂತೆ ಒಟ್ಟು 35 ಸಿಟಿ ಬಸ್‌ಗಳು ಸಂಚರಿಸುತ್ತಿವೆ. ದಿನಕ್ಕೆ 353 ಟ್ರಿಪ್‌ ಸಂಚರಿಸುತ್ತಿದ್ದು, ಹತ್ತು ದಿನದ ಬಳಿಕ ಟ್ರಿಪ್‌ ಸಂಖ್ಯೆ 700ಕ್ಕೇರಲಿದೆ. ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿಯಾದ ಬಳಿಕ ಟ್ರಿಪ್‌ಗಳ ಸಂಖ್ಯೆಯೂ ಹೆಚ್ಚಾಗಲಿದೆ. ಗ್ರಾಮೀಣ ಪ್ರದೇಶಕ್ಕೂ ಸಿಟಿ ಬಸ್‌ ವಿಸ್ತರಿಸುವಂತೆ ಜನರು ಕೇಳುತ್ತಾರೆ. ಆದರೆ, ನಗರ ಸಾರಿಗೆ ಬಸ್‌ ಸಂಚಾರ ಮಿತಿ 7 ಕಿ.ಮೀ. ಮಾತ್ರ’ ಎಂದು ಹೇಳಿದರು.

‘ಟಾಟಾ ಕಂಪೆನಿಯವರು ಚಾಲಕರಿಗೆ ತಾಂತ್ರಿಕ ತರಬೇತಿ ನೀಡುವರು. ರೈಲ್ವೆ ನಿಲ್ದಾಣದ ಬಳಿ ಮೈಸೂರು–ಹಾಸನ ರೈಲು ಬರುವ ಸಮಯಕ್ಕೆ ವಿಶೇಷವಾಗಿ ಮೂರು ಬಸ್‌ ಬಿಡಲಾಗಿದೆ. ಹೆಚ್ಚು ಆದಾಯ ಬರುವ ದಾಸನಕೊಪ್ಪಲಿಗೆ ಆರು ಬಸ್‌ ಬಿಡಲಾಗಿದ್ದು, ಸದ್ಯದಲ್ಲೇ 9ಕ್ಕೆ ಹೆಚ್ಚಿಸಲಾಗುವುದು. ಕೃಷ್ಣನಗರದಲ್ಲಿ ಪ್ರಯಾಣಿಕರ ಸಂಖ್ಯೆ ಅಷ್ಟೆಕಷ್ಟೇ. ವಿದ್ಯಾರ್ಥಿಗಳ ಬಸ್‌ ಪಾಸ್‌ 35 ಸಾವಿರ ಇದೆ. ವಿದ್ಯಾರ್ಥಿಗಳು ಸೇರಿದಂತೆ ಅಂದಾಜು ದಿನಕ್ಕೆ 22 ಸಾವಿರ ಪ್ರಯಾಣಿಕರು ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಸೋಮವಾರ ಮತ್ತು ಮಂಗಳವಾರ ಸಂತೆ ನಡೆಯುವುದರಿಂದ ಅಂದು ಪ್ರಯಾಣಿಕರ ಸಂಖ್ಯೆ ಹೆಚ್ಚು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.