ADVERTISEMENT

ನಗರೋತ್ಥಾನ: ₹ 94 ಕೋಟಿ ಬಿಡುಗಡೆ

ರಸ್ತೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಆದ್ಯತೆ: ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:40 IST
Last Updated 14 ಏಪ್ರಿಲ್ 2017, 8:40 IST

ಹಾಸನ: ನಗರೋತ್ಥಾನ ಯೋಜನೆಯಲ್ಲಿ ಜಿಲ್ಲೆಗೆ ₹ 94 ಕೋಟಿ ಅನುದಾನ ಬಿಡುಗಡೆಯಾಗಿದ್ದು,  ರಸ್ತೆಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ  ಸಚಿವ ಎ.ಮಂಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸುವಂತೆ ನಿರ್ದೇಶನ ನೀಡಿದರು.

ಅನುದಾನ ಬಿಡುಗಡೆಯಾಗಿ ಅನೇಕ ದಿನಗಳಾದರೂ ಈವರೆಗೆ ನಿರೀಕ್ಷಿತ ಪ್ರಗತಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತ್ವರಿತವಾಗಿ ಅನುಷ್ಠಾನಗೊಳಿಸದಿದ್ದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಪ್ರಕಾಶ್, ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಹಣ ಬಿಡುಗಡೆಯಾಗಿ ಹಲವು ದಿನ ಕಳೆದರೂ  ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ನಗರಸಭೆ ಅಧ್ಯಕ್ಷ ಡಾ.ಎಚ್.ಎಸ್. ಅನಿಲ್ ಕುಮರ್ ಮತ್ತು ಹುಡಾ ಅಧ್ಯಕ್ಷ ಕೃಷ್ಣಕುಮಾರ್  ಹಾಜರಿದ್ದರು.

15 ಸಾವಿರ ಮೆಟ್ರಿಕ್‌ ಟನ್‌ ಹಸಿರು ಮೇವು ಖರೀದಿ
ಹಾಸನ:
ರಾಜ್ಯದಲ್ಲಿರುವ 1.30 ಕೋಟಿ ಜಾನುವಾರುಗಳ ಹಸಿವು ನೀಗಿಸಲು ಪಂಜಾಬ್‌ನಿಂದ 15 ಸಾವಿರ ಮೆಟ್ರಿಕ್ ಟನ್ ಹಸಿರು ಮೇವು ಖರೀದಿಸಲಾಗಿದ್ದು, ಪ್ರತಿ ಕೆ.ಜಿ ಮೇವಿಗೆ ₹ 13.20 ಭರಿಸಲಾಗಿದೆ ಎಂದು    ಸಚಿವ ಎ. ಮಂಜು ತಿಳಿಸಿದರು.

ಬರದಿಂದಾಗಿ ಕೆಲ ಜಿಲ್ಲೆಗಳಲ್ಲಿ ರಾಸುಗಳ ಜೀವನ ಅತ್ಯಂತ ಕಷ್ಟಕರವಾಗಿದೆ. ಈಗ ಇರುವ ಮೇವು ಮುಂದಿನ ಎರಡು ವಾರದ ವರೆಗೆ ಸಾಕಾಗಬಹುದು. ಆದ್ದರಿಂದ ಈಗಿನಿಂದಲೇ ಮೇವು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 89 ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

ನಗರೋತ್ಥಾನ ಯೋಜನೆಯಡಿ ಪಟ್ಟಣ ಹಾಗೂ ನಗರ ಪ್ರದೇಶದ ಅಭಿವೃದ್ಧಿಗೆ ₹ 94 ಕೋಟಿ  ಅನುದಾನ ಬಿಡುಗಡೆ ಮಾಡಲಾಗಿದೆ. ಹಾಸನಕ್ಕೆ ₹ 35 ಕೋಟಿ, ಅರಸೀಕೆರೆಗೆ ₹ 25 ಕೋಟಿ, ಚನ್ನರಾಯಪಟ್ಟಣ, ಬೇಲೂರು, ಹೊಳೆನರಸೀಪುರ ಹಾಗೂ ಸಕಲೇಶಪುರ ತಾಲ್ಲೂಕಿಗೆ ತಲಾ ₹ 7.5 ಕೋಟಿ  ಮತ್ತು ಅರಕಲಗೂಡು, ಆಲೂರು ತಾಲ್ಲೂಕಿಗೆ ತಲಾ ₹ 2 ಕೋಟಿ ಅನುದಾನ ಬಿಡುಗಡೆ ಆಗಿದೆ.

ADVERTISEMENT

ಮೂರು ತಿಂಗಳ ಒಳಗೆ ಪಟ್ಟಣ ಪ್ರದೇಶದ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಸನದ ಎಸ್ಎಂ ಕೃಷ್ಣ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ ಪ್ರತಿ ಎಕರೆಗೆ 9,500 ಅಡಿ ಜಾಗ ನೀಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.