ADVERTISEMENT

‘ನವಿಲೆ ನಾಗೇಶ್ವರ’ ಅಭಿವೃದ್ಧಿಗೆ ಆದ್ಯತೆ

ಕೆ.ಎಸ್.ಸುನಿಲ್
Published 23 ಏಪ್ರಿಲ್ 2017, 10:49 IST
Last Updated 23 ಏಪ್ರಿಲ್ 2017, 10:49 IST
‘ನವಿಲೆ ನಾಗೇಶ್ವರ’ ಅಭಿವೃದ್ಧಿಗೆ ಆದ್ಯತೆ
‘ನವಿಲೆ ನಾಗೇಶ್ವರ’ ಅಭಿವೃದ್ಧಿಗೆ ಆದ್ಯತೆ   

ಹಾಸನ: ಇತಿಹಾಸ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ದೇವಸ್ಥಾನವನ್ನು ಕುಕ್ಕೆ ಸುಬ್ರಹ್ಮಣ್ಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.ವರ್ಷದಿಂದ ವರ್ಷಕ್ಕೆ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ  ಹೆಚ್ಚು ತ್ತಿದೆ. ಇದನ್ನು ಮನಗಂಡು ಮುಜರಾಯಿ ಇಲಾಖೆ ಅಭಿವೃದ್ಧಿಗೆ ಒತ್ತು ನೀಡಿದೆ.₹ 79 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಾಸೋಹ ಭವನ ಮತ್ತು ಯಾತ್ರಿ ನಿವಾಸ ಉದ್ಘಾಟನೆಗೆ ಸಿದ್ದವಾಗಿದೆ.  ಅಲ್ಲದೇ ಮುಡಿಮನೆ, ಶೌಚಾಲಯ, ವಾಚ್‌ಮನ್‌ ಮನೆಗಳ ನಿರ್ಮಾಣ ಭರದಿಂದ ಸಾಗಿದೆ.

ದೇಗುಲದ ಆವರಣದಲ್ಲಿರುವ ಬಾವಿಯಲ್ಲಿ ಈವರೆಗೆ ನೀರು ಬತ್ತದಿರುವುದು ವಿಶೇಷ. ಮಕ್ಕಳು ಆಟವಾಡಲು ಸಣ್ಣ ಉದ್ಯಾನ ನಿರ್ಮಿಸಲಾಗಿದೆ. ದಾನಿಗಳು ನೀಡಿದ ದವಸ, ಧಾನ್ಯಗಳಿಂದಲೇ ಪ್ರತಿ ದಿನ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3.30ರ ವರೆಗೆ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ.ಈ ದೇವಸ್ಥಾನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿಯ ನವಿಲೆ ಗ್ರಾಮದಲ್ಲಿದೆ. ಹೊಯ್ಸಳ ವಂಶಸ್ಥರು ನಾಗೇಶ್ವರಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಪಡಸಾಲೆ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿ ಮುಡಿ ತೆಗೆಸಿಕೊಂಡು ತೀರ್ಥಕೊಳದ ನೀರಿನಿಂದ ಸ್ನಾನ ಮಾಡಿ ಉರುಳು ಸೇವೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಿಯಾಗುತ್ತದೆ ಹಾಗೂ ನಾಗದೋಷವುಳ್ಳವರು ಬೆಳ್ಳಿ ನಾಗ, ನಾಗರ ಕಲ್ಲು ಪ್ರತಿಷ್ಠಾಪಿಸಿದರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಇದಕ್ಕೆ ನಿರ್ದಶನವಾಗಿ ದೇಗುಲದ ಸುತ್ತಲೂ ಸಹಸ್ರಾರು ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿರುವುದು ನೋಡಬಹುದು.‘ಶ್ರಾವಣ, ಕಾರ್ತಿಕದಲ್ಲಿ ಭಕ್ತರು ಹೆಚ್ಚು ಭೇಟಿ ನೀಡುತ್ತಾರೆ.  ಶೈವ ಸಂಪ್ರದಾಯ ಪ್ರಕಾರ ನಿರ್ಮಿಸಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲದೇ, ಮಹಾರಾಷ್ಟ್ರ, ತಮಿಳುನಾಡು, ಆಂದ್ರ ಪ್ರದೇಶದಿಂದ ಭಕ್ತರು ಬಂದು ಹರಕೆ ತೀರಿಸುತ್ತಾರೆ. ಸರ್ಪ ಸಂಸ್ಕಾರ ಮತ್ತು  ಸೋಮವಾರ ಆಶ್ಲೇಷ ಪೂಜೆ ನಡೆಯಲಿದೆ’  ಎಂದು ಅರ್ಚಕ ಅಭಿಲಾಶ್‌ ತಿಳಿಸಿದರು.

ADVERTISEMENT

ನಾಗೇಶ್ವರಸ್ವಾಮಿ ದೇವಾಲಯದ ಸುತ್ತಮುತ್ತ ಸೋಮೇಶ್ವರ, ಬ್ರಹ್ಮಲಿಂಗೇಶ್ವರ, ಸಿದ್ಧೇಶ್ವರ, ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳಿವೆ. ಕಡೆ ಕಾರ್ತಿಕ ಸೋಮವಾರದಂದು ತಲಕಾಡಿನ ಪಂಚಲಿಂಗ ದರ್ಶನದಂತೆ ನಾಗರ ನವಿಲೆಯಲ್ಲಿಯೂ ಪಂಚಲಿಂಗ ದರ್ಶನ ದೊರೆಯುತ್ತದೆ.‘ಪ್ರಜಾವಾಣಿ’ ಜತೆ ಮಾತನಾಡಿದ ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌ . ನಾಗರಾಜ್‌, ‘ನಾಗೇಶ್ವರ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಾದರಿ ಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ ವರ್ಷ ₹ 40 ಲಕ್ಷ ಆದಾಯ ಬಂದಿದೆ. ಭಕ್ತರ ಅನುಕೂಲಕ್ಕಾಗಿ ದಾಸೋಹ ಭವನ, ಯಾತ್ರಿ ನಿವಾಸ ನಿರ್ಮಿಸಲಾಗಿದೆ.

ದಾನಿಗಳ ನೆರವಿನಿಂದ ತಲಾ ₹ 5 ಲಕ್ಷ ವೆಚ್ಚದ ಮುಡಿ ಮನೆ, ಶೌಚಾಲಯ ನಿರ್ಮಿಸಲಾಗುತ್ತಿದೆ. ಗ್ರಾಮಸ್ಥರ ವಶದ ಲ್ಲಿರುವ ಸಮುದಾಯ ಭವನವನ್ನು ದೇಗುಲದ ಸುಪರ್ದಿಗೆ ಪಡೆದು ಹೊಸದಾಗಿ ನಿರ್ಮಿಸಲಾಗುವುದು. ನಂತರ ಮದುವೆ ಹಾಗೂ ಇತರೆ ಪೂಜಾ ಕಾರ್ಯಕ್ಕೆ ನೀಡುವ ಉದ್ದೇಶ ಇದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.