ADVERTISEMENT

ಪರಿಹಾರ ಸಿಗಲಿಲ್ಲ, ಜಮೀನೂ ಇಲ್ಲ: ರೈತರ ಅಳಲು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:52 IST
Last Updated 31 ಡಿಸೆಂಬರ್ 2016, 5:52 IST

ಹಾಸನ: ‘ನನಗಿರೋದು ಕೇವಲ 10 ಗುಂಟೆ ಜಮೀನು, ಹೇಳದೆ ಕೇಳದೆ ಅದನ್ನ ಬರೆಸ್ಕೊಂಡಿದೀರಿ, ನಾಲ್ಕು ಮಕ್ಕಳ ಮದ್ವೆ ಮಾಡ್ಬೇಕು, ನಾಲ್ಕು ವರ್ಷಗಳಿಂದ ನಿಮ್ಮ ಕಚೇರಿಗೆ ಅಲೆದು ಅಲೆದು ಸಾಕಾಗಿದೆ, ಪರಿಹಾರ ಇಲ್ಲ ಜಮೀನೂ ಇಲ್ಲ’...

ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಎಸ್.ಎಂ.ಕೃಷ್ಣ ಬಡಾವಣೆ ನಿವೇಶನ ಹಂಚಿಕೆ ಸಂಬಂಧ ನಡೆದ ಸಭೆಯಲ್ಲಿ ಜಮೀನು ಕಳೆದುಕೊಂಡ ಬೂವನಹಳ್ಳಿ ಗ್ರಾಮದ ಜಯಮ್ಮ ಅವರ ನೋವಿನ ಮಾತಿದು.

ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಎಸ್.ಎಂ.ಕೃಷ್ಣ ನಗರ ಬಡಾವಣೆಯಲ್ಲಿ ಭೂ ಮಾಲೀಕರಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಬಗ್ಗೆ ಒಂದು ವಾರದಲ್ಲಿ ತೀರ್ಮಾನ  ಕೈಗೊಳ್ಳಲಾಗು ವುದು ಎಂದರು.

50:50ರ ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಬೇಕು ಹಾಗೂ ಅವರು ಭೂಮಿ ಕಳೆದುಕೊಂಡಿರುವ ಗ್ರಾಮ ದಲ್ಲೇ ನಿವೇಶನ ನೀಡಬೇಕು ಎಂದು ಬಯಸುತ್ತಿದ್ದಾರೆ.  ನ್ಯಾಯಾಲಯದ ಆದೇಶ 40:60 ಅನುಪಾತದಲ್ಲಿರಬೇಕು ಎಂದಿರುವುದರಿಂದ ಕಾನೂನಿನಲ್ಲಿ ಅದನ್ನು ಬದಲಿಸಲು ಅವಕಾಶವಿದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ ಎಂದರು.

ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ‘ರೈತರಿಗೆ ನೀಡಬೇಕಿರುವ ಭೂಮಿ ಪ್ರಮಾಣ ಎಷ್ಟು? ಭೂಮಿ ಕಳೆದುಕೊಂಡ ಸ್ಥಳದಲ್ಲಿಯೇ ನಿವೇಶನ ಹಂಚಿಕೆ ಮಾಡಲು ಸಾಧ್ಯವೇ ? ಎನ್ನುವುದು ತೀರ್ಮಾನವಾಗಬೇಕು. 5 ಗುಂಟೆಗಿಂತಲೂ ಕಡಿಮೆ ಭೂಮಿ ನೀಡಿರುವ ಭೂ ಮಾಲೀಕರಿಗೆ ಒಪ್ಪಂದದ ಅನುಪಾತದ ಪ್ರಕಾರ 30/40 ನಿವೇಶನವೂ ದೊರೆಯು ವುದಿಲ್ಲ. ಆಗ ಅವರು ಹೆಚ್ಚುವರಿ ಹಣ ಪಾವತಿಸಬೇಕು. ಈಗಾಗಲೇ ಸಾಲ ಮಾಡಿ ಪರಿಹಾರ ಹಿಂದಿರುಗಿಸಿರುವ ರೈತರು ಪುನಃ ಮೂರ್ನಾಲ್ಕು ಲಕ್ಷ ರೂಪಾಯಿ ಪಾವತಿಸಲು ಸಾಧ್ಯವಿಲ್ಲ. ಅವರ ವಿಷಯದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೀರಿ ಎನ್ನುವುದನ್ನು ನಿರ್ಧರಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ವಿ.ಚೈತ್ರಾ ಪ್ರಾಧಿಕಾರದ ಸಮಿತಿ ನಿರ್ದೇಶಕರ ಸಭೆ ಕರೆಯದೇ ಏಕಪಕ್ಷೀಯ ನಿಲುವು ತಳೆಯುತ್ತಿದ್ದಾರೆ. ಆನ್‌ಲೈನ್ ಮೂಲಕ ಸೈಟ್ ಹಂಚಲು ಹೊರಟಿರುವ ಇವರು ಸಮಿತಿಯಲ್ಲಿ ಚರ್ಚಿಸದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, 31 ಜನರ 5 ಗುಂಟೆಗಿಂತಲೂ ಕಡಿಮೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವರೆಲ್ಲರಿಗೂ ನಿವೇಶನ ದೊರೆಯಲಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಹೀಗಾಗಿ ಹುಡಾ ಸಭೆ ನಡೆಸಿ ಶೀಘ್ರವೇ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೂವನಹಳ್ಳಿ, ದೊಡ್ಡಪುರ, ಸಂಕೇನಹಳ್ಳಿ ಎಂದು ವಿಭಾಗಿಸಿ ಮೂರು ಹಂತಗಳಲ್ಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ಹುಡಾ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, 2002ರಿಂದ ಆರಂಭವಾದ ಎಸ್.ಎಂ. ಕೃಷ್ಣ ಬಡಾವಣೆ ಕಾಮಗಾರಿ ಇಷ್ಟು ವರ್ಷಗಳಲ್ಲಿ ಅನೇಕ ತಿರುವು ಪಡೆದುಕೊಂಡಿದೆ. ಒಟ್ಟು 463 ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಇದರಲ್ಲಿ 103 ರೈತ ಮಹಿಳೆಯರಿದ್ದಾರೆ. ಜಿಲ್ಲಾಡಳಿತ ಈ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಎಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ನಿವೇಶನ ಹಂಚಿಕೆಗೆ ಇರುವ ಕಾನೂನು ತೊಡಕನ್ನು ನಿವಾರಿಸಿ ನ್ಯಾಯ ಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್, ಹುಡಾ ಆಯುಕ್ತ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.