ADVERTISEMENT

‘ಫಸಲ್‌ ಬಿಮಾ’: ಮುಂದುವರಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:46 IST
Last Updated 31 ಡಿಸೆಂಬರ್ 2016, 5:46 IST

ಹಿರೀಸಾವೆ: ಎರಡು ದಿನಗಳಿಂದ ಸಾವಿರಾರು ರೈತರು ‘ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ’ಯಡಿ ನೋಂದಣಿ ಮಾಡಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಆದರೆ, ಸರಿಯಾದ ಮಾಹಿತಿ ಯಾರಿಗೂ ಇಲ್ಲ. ವಿಮಾ ಕಂತು ತುಂಬಿ ಮೋಸ ಹೋಗಿದ್ದೇವೆಯೇ ಎಂಬ ಆತಂಕ ರೈತರಲ್ಲಿ ಮೂಡಿದೆ.

ಯುನೈಟಡ್‌ ಇಂಡಿಯಾ ವಿಮಾ ಕಂಪೆನಿಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಇದರ ನಿಯಮದ ಪ್ರಕಾರ ಅಕ್ಟೋಬರ್‌ ತಿಂಗಳ ನಂತರ (ಹಿಂಗಾರು) ಬಿತ್ತನೆ ಮಾಡಿದ್ದ ರೈತರು ಮಾತ್ರ ಬೆಳೆ ವಿಮೆ ಮಾಡಿಸಲು ಅರ್ಹರು ಎಂದು ನೊಡೆಲ್‌ ಬ್ಯಾಂಕ್‌ನ ಅಧಿಕಾರಿ ಗಳು ಗುರುವಾರ ಸಂಜೆ ರೈತರಿಗೆ ಮಾಹಿತಿ ನೀಡಿದ್ದಾರೆ.  

ನಿಯಮಗಳ ಪ್ರಕಾರ ಬೆಳೆ ವಿಮೆ ಕಂತು ಕಟ್ಟಿರುವ ರೈತರ ಭೂಮಿಯನ್ನು  ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಮತ್ತು ವಿಮಾ ಕಂಪನಿಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಲ್ಲಿ ಬೆಳೆ ಇರಬೇಕು. ಅದರ ಚಿತ್ರವನ್ನು ಅಧಿಕಾರಿಗಳು ತೆಗೆದುಕೊಂಡು ವಿಮೆಯ ಅರ್ಹತೆ ನೀಡುತ್ತಾರೆ ಎಂದು ನೋಡೆಲ್‌ ಬ್ಯಾಂಕ್‌ ಅಧಿಕಾರಿ ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಡಿಸೆಂಬರ್‌ ತಿಂಗಳ ಅಂತ್ಯದೊಳಗೆ ಹೋಬಳಿಯ ಬಹುತೇಕ ರೈತರು ಬೆಳೆಯನ್ನು ಕಟಾವು ಮಾಡಿರುತ್ತಾರೆ. ಉತ್ತಮ ಫಸಲು ಬಾರದವರು, ಜಾನು ವಾರುಗಳನ್ನು ಬಿಟ್ಟು ಬೆಳೆಯನ್ನು ಮೆಯಿಸಿರುತ್ತಾರೆ. ಅಧಿಕಾರಿಗಳು ಪರಿ ಶೀಲನೆ ನಡೆಸುವಾಗ ಬೆಳೆಯನ್ನು ಹೇಗೆ ತೋರಿಸಲು ಸಾಧ್ಯ?’ ಎಂದು ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡರು.

ವಿಮೆ ಕಂತು ಕಟ್ಟಲು ಅಗತ್ಯ ಇರುವ ಪಹಣಿ, ಬಿತ್ತನೆ ದೃಢೀಕರಣ ಪತ್ರಗಳನ್ನು ಪಡೆಯಲು ನೂರಾರು ರೈತರು ಬೆಳಿಗ್ಗೆಯಿಂದಲೇ ನಾಡಕಚೇರಿಯ ಮುಂದೆ ಸೇರಿದ್ದರು. ಸಂಜೆಯಾದರೂ ಬಹುತೇಕ ರೈತರಿಗೆ ಅಗತ್ಯ ದಾಖಲೆಗಳು ದೊರೆಯಲಿಲ್ಲ.

ಗ್ರಾ.ಪಂ.ಗಳಲ್ಲಿ ಅಂತರ್ಜಾಲ ಸಂಪ ರ್ಕದ ಸಮಸ್ಯೆಯಿಂದಾಗಿ ಪಹಣಿ ಪತ್ರ ವಿತರಣೆ ಮಾಡುತ್ತಿಲ್ಲ. ಇದರಿಂದ ರೈತರು ಅಲೆಯುತ್ತಿದ್ದಾರೆ. ಡಿ. 31ರಂದು ವಿಮೆ ಯೋಜನೆಗೆ ನೋಂದಣಿ ಮಾಡಲು ಕಡೆಯ ದಿನವಾಗಿದೆ.

ಸರಿಯಾಗಿ ಮಾಹಿತಿ ನೀಡದಿರುವು ದರಿಂದ ಸಾವಿರಾರು ರೈತರು ಎರಡು ದಿನಗಳಿಂದ ಮನೆ ಕೆಲಸ ಬಿಟ್ಟು ವಿಮೆ ನೋಂದಣಿ ಮಾಡಿಸಲು ಕಷ್ಟಪಟ್ಟಿದ್ದಾರೆ. ಇವರಿಗೆ ವಿಮೆ ಸಿಗುವ ಭರವಸೆಯನ್ನು ಯಾವುದೇ ಅಧಿಕಾರಿಗಳು ನೀಡಿಲ್ಲ.

ಏನು ಮಾಡುವುದು ತಿಳಿಯುತ್ತಿಲ್ಲ
‘ವಿಮೆಯ ಬಗ್ಗೆ ಸರ್ಕಾರ ಮತ್ತು ಬ್ಯಾಂಕ್‌ನವರು ರೈತರಿಗೆ ಸರಿಯಾದ ಮಾಹಿತಿ ನೀಡದೆ, ದಾರಿತಪ್ಪಿಸಿದ್ದಾರೆ. ಬೆಳಗ್ಗೆಯಿಂದ ದಾಖಲೆಗಳನ್ನು ಪಡೆಯಲು ಊಟ ಇಲ್ಲದೇ ಕಚೇರಿಯ ಮುಂದೆ ಕಾಯುತ್ತಿದ್ದಾರೆ. ಯಾರದೋ ತಪ್ಪಿಗೆ ರೈತರಿಗೆ ಶಿಕ್ಷೆ. ಬುಧವಾರ ಕೈಬರಹದ ಬೆಳೆ ದೃಢೀಕರಣ ಪತ್ರ ಸಾಕು ಎಂದಿದ್ದ ಅಧಿಕಾರಿಗಳು ಗುರುವಾರ ಕಂಪ್ಯೂಟರ್ ದೃಢೀ ಕೃತ ಪತ್ರವೇ ಬೇಕು ಎನ್ನುತ್ತಾರೆ. ಈಗ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ಎನ್ನುತ್ತಾರೆ ರೈತ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.