ADVERTISEMENT

ಬತ್ತಿ ಬರಿದಾದ ನದಿ ಒಡಲು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:41 IST
Last Updated 16 ಏಪ್ರಿಲ್ 2017, 6:41 IST
ಬತ್ತಿ ಬರಿದಾದ ನದಿ ಒಡಲು
ಬತ್ತಿ ಬರಿದಾದ ನದಿ ಒಡಲು   

ಆಲೂರು: ಸಣ್ಣಕ್ಕಿ ಆಲೂರು ಎಂದೇ ಹೆಸರುವಾಸಿಯಾದ ಅರೆಮಲೆನಾಡು ಸತತ ಮೂರು ವರ್ಷಗಳ ಬರಗಾಲಕ್ಕೆ ಸಿಲುಕಿದ್ದು, ಜನ, ಜಾನುವಾರುಗಳು ಜೀವಜಲಕ್ಕಾಗಿ ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ನದಿ ಮೂಲಗಳಾದ ಯಗಚಿ, ಹೇಮಾವತಿ ನದಿಯೊಡಲು ಬರಿದಾಗಿದೆ. ವಾಟೆಹೊಳೆ ಜಲಾಶಯದಿಂದ ನಾಲೆಗಳಲ್ಲಿ ಹರಿಸುತ್ತಿದ್ದ ನೀರು ಕೂಡ ವರ್ಷದಿಂದ ಕಡಿಮೆ ಆಗಿದ್ದು,  ಅಂತರ್ಜಲದ ಮಟ್ಟ ಸಹ ಕುಸಿಯುತ್ತಿದೆ. ವಾಡಿಕೆ ಮಳೆ 1186 ಮಿ.ಮೀ ಪೈಕಿ 771.8 ಮಿ.ಮೀ ಮಳೆಯಾಗಿದ್ದು, ಶೇ 35ರಷ್ಟು ಕೊರತೆಯಾಗಿದೆ.

11,000 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 8,500 ಹೆಕ್ಟೇರ್ ಬಿತ್ತನೆ ಆಗಿದೆ. ವರುಣ ಕೈ ಕೊಟ್ಟ ಕಾರಣ ಬಿತ್ತಿದ ಬೀಜ ಮೊಳಕೆಯೊಡಲಿಲ್ಲ. ಹೀಗಾಗಿ ರೈತರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ.ತಾಲ್ಲೂಕಿನ ಪ್ರಮುಖ ಬೆಳೆ ಮುಸುಕಿನ ಜೋಳದ ಬಿತ್ತನೆಯ ಗುರಿ 4500 ಹೆಕ್ಟೇರ್ ಪೈಕಿ 5500 ಹೆಕ್ಟೇರ್ ಬಿತ್ತನೆ ಆಗಿದೆ. ಫಸಲು ಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆಯೂ ಕೈ ಸೇರದೆ ಮಾಡಿದ ಸಾಲ ತೀರಿಸಲು ಆಗದೆ ರೈತರು ಕಂಗಾಲಾಗಿದ್ದಾರೆ. ಸಾಲ ಬಾಧೆ, ಬೆಳೆ ನಷ್ಟದಿಂದ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಬಿತ್ತನೆಯಾಗಿದ್ದ 8,500ಹೆಕ್ಟೇರ್ ಪ್ರದೇಶದಲ್ಲಿ ಶೇ 40ರಷ್ಟು ಬೆಳೆ ಹಾನಿಯಾಗಿದ್ದು, ₹ 5.58 ಕೋಟಿ ನಷ್ಟವಾಗಿದೆ. 15,600 ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 6800 ಬೆಳೆ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಕೃಷಿ ಅಧಿಕಾರಿ ಯೋಗಾನಂದ್ ತಿಳಿಸಿದರು.2012ರ ಪಶುಗಣತಿ ಪ್ರಕಾರ ಒಟ್ಟು 50,913 ಜಾನುವಾರುಗಳಿದ್ದು, ಹಸು 43,952, ಎಮ್ಮೆ 3,791, ಮೇಕೆ 2,625 ಹಾಗೂ ಉಳಿದವು ಹಂದಿ.

ADVERTISEMENT

‘ಈ ವರೆಗೂ 159 ಟನ್ ಮೇವನ್ನು ಹೊರ ಜಿಲ್ಲೆಗಳಿಂದ ತರಿಸಲಾಗಿದೆ. ಪಾಳ್ಯ, ಕುಂದೂರು ಹಾಗೂ ಕಸಬಾ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಜೊತೆಗೆ ನೀರಾವರಿ ಹೊಂದಿರುವ ಪ್ರತಿ ರೈತರಿಗೆ 6ಕೆ.ಜಿ. ಬಿತ್ತನೆ ಜೋಳ ವಿತರಿಸಲಾಗುತ್ತಿದೆ’ ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರ ಕುಮಾರ್ ತಿಳಿಸಿದರು.

‘ಬರಗಾಲ ಪೀಡಿತ ಆಲೂರಿಗೆ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಜಿಲ್ಲಾಧಿಕಾರಿ ಅನುದಾನದಡಿ ₹ 64 ಲಕ್ಷ, ಎನ್.ಆರ್.ಡಿ.ಡಬ್ಲೂ.ಪಿ. ಯೋಜನೆಯಡಿ ₹ 31ಲಕ್ಷ ಬಿಡುಗಡೆ ಯಾಗಿದೆ. 25 ಕೊಳವೆ ಬಾವಿ ಕೊರೆ ಸಿದ್ದು, ಅದರಲ್ಲಿ 6 ವಿಫಲಗೊಂಡಿವೆ. ಒಟ್ಟು 116 ಕಾಮಗಾರಿ ಕೈಗೆತ್ತಿಕೊಂಡಿದ್ದು, 43 ಮುಗಿಯುವ ಹಂತದಲ್ಲಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೈಲಾಸ್ ಮೂರ್ತಿ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.