ADVERTISEMENT

ಬಿಡಾಡಿ ಶ್ವಾನಗಳ ಉಪಟಳ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:32 IST
Last Updated 18 ಸೆಪ್ಟೆಂಬರ್ 2017, 8:32 IST
ಹಾಸನದ ಗೌರಿಕೊಪ್ಪಲು ಮತ್ತು ವಿವೇಕ ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಿದೆ.
ಹಾಸನದ ಗೌರಿಕೊಪ್ಪಲು ಮತ್ತು ವಿವೇಕ ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಿದೆ.   

ಹಾಸನ: ನಗರದ ಬಡಾವಣೆಗಳಲ್ಲಿ ಬಿಡಾಡಿ ಶ್ವಾನಗಳ ಉಪಟಗಳ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು ಮತ್ತು ಅಶಕ್ತರು ತಿರುಗಾಡಲು ಹೆದರುವಂತಾಗಿದೆ. ನಗರದ ಗೌರಿ ಕೊಪ್ಪಲು, ವಿವೇಕನಗರ, ಲೋಕೋಪಯೋಗಿ ವಸತಿ ಗೃಹ, ಹೊಸಲೈನ್‌ ವೃತ್ತ, ಮಟನ್‌ ಮಾರುಕಟ್ಟೆ ಹಾಗೂ ಕೋಳಿ ಅಂಗಡಿಗಳ ಬಳಿ ನಾಯಿಗಳ ಹಿಂಡು ಕಾಣಿಸಿಕೊಳ್ಳುತ್ತಿದೆ. ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.\

ಕೆಲ ದಿನಗಳ ಹಿಂದೆಯಷ್ಟೇ ಬೇಲೂರಿನಲ್ಲಿ ಬೀದಿನಾಯಿಗಳು ಸುಮಾರು 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದ್ದವು. ನಗರದಲ್ಲಿಯೂ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವ ನಿರ್ದಶನಗಳಿವೆ.

ರಸ್ತೆಗಳಲ್ಲಿ ಪರಸ್ಪರ ಕಚ್ಚಾಡಿಕೊಂಡ ನಾಯಿಗಳು ವಾಹನಗಳಿಗೆ ಅಡ್ಡ ಬಂದು ಅಪಘಾತ ಉಂಟು ಮಾಡಿರುವ ಉದಾಹರಣೆಯೂ ಇದೆ. ಇತ್ತೀಚೆಗೆ ಕರು ಮೇಲೆ ನಾಯಿಗಳ ಹಿಂಡು ದಾಳಿ ಮಾಡಿ ಕೊಂದು ಹಾಕಿದ್ದವು.

ADVERTISEMENT

ರಾತ್ರಿ ನಾಯಿಗಳ ರೋದನ ನಿದ್ರಾಭಂಗಕ್ಕೆ ಕಾರಣವಾಗುತ್ತಿದೆ. ಮೀನು, ಮಾಂಸ ಮಾರುಕಟ್ಟೆ ಹಾಗೂ ಕೋಳಿ ಅಂಗಡಿ ತ್ಯಾಜ್ಯ ಬಿಸಾಡುವ ಕಡೆ ನಾಯಿಗಳು ಹಿಂಡು ಹೆಚ್ಚು ಕಾಣಿಸಿಕೊಳ್ಳುತ್ತವೆ.ಇವುಗಳ ಜತೆಗೆ ಬಿಡಾಡಿ ದನಗಳ ಹಿಂಡು ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ಬೀಡು ಬಿಡುತ್ತಿವೆ. ಮಾರಾಟಕ್ಕೆ ಇಟ್ಟಿರುವ ತರಕಾರಿಗೂ ಬಾಯಿ ಹಾಕಿ ತೊಂದರೆ ಉಂಟು ಮಾಡುತ್ತವೆ.

ಶ್ವಾನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ನಾಯಿ ಕೊಲ್ಲುವುದನ್ನು ನಿಷೇಧಿಸಿರುವುದು ಸಹ ಶ್ವಾನಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ನಗರಸಭೆಯಲ್ಲಿ ನಡೆದ ನಾಗರಿಕರ ಕುಂದುಕೊರತೆ ಸಭೆಯಲ್ಲೂ ಹಿರಿಯ ನಾಗರಿಕರು ನಗರದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯ ಮಾಡಿದ್ದರು. ಆದರೂ ನಗರಸಭೆ ಕಡಿವಾಣ ಹಾಕಲು ಹಿಂದೇಟು ಹಾಕುತ್ತಿದೆ.

‘ಗೌರಿಕೊಪ್ಪಲು ಮತ್ತು ವಿವೇಕ ನಗರದ ಪ್ರಮುಖ ಬೀದಿಗಳಲ್ಲಿ ಶ್ವಾನಗಳು ಹೆಚ್ಚಿರುವುದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಾಗರಿಕರಲ್ಲಿ ಭಯ ಮನೆ ಮಾಡಿದೆ. ಬಿಡಾಡಿ ದನಗಳ ಸಂಖ್ಯೆಯೂ ಹೆಚ್ಚಾಗಿದೆ. ಕೆಲವರು ಮನೆಯ ಸಾಕು ನಾಯಿಗಳನ್ನು ಬೀದಿಗಳಿಗೆ ಬಿಡುತ್ತಿದ್ದಾರೆ. ಭಯದಲ್ಲಿ ಓಡಾಡುವಂತಾಗಿದೆ. ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಬೇಕು. ನಾಯಿಗಳ ಹಾವಳಿ ತಪ್ಪಿಸಿ, ಅಪಾಯಗಳನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಬೇಕು’ ಎಂದು ಹಿರಿಯ ನಾಗರಿಕ ಬಿ.ಎನ್‌.ರಾಮಸ್ವಾಮಿ ಒತ್ತಾಯಿಸಿದರು.

‘ನಾಯಿಗಳನ್ನು ಹಿಡಿದರೆ ಪ್ರಾಣಿ ದಯಾ ಸಂಘದವರು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಏನು ಮಾಡಬೇಕು’ ಎಂದು ನಗರಸಭೆ ಅಧ್ಯಕ್ಷ ಅನಿಲ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. ‘ನಾಯಿಗಳ ಆಯುಷ್ಯ 15 ವರ್ಷ. ಒಂದೇ ಬಾರಿಗೆ ಮೂರರಿಂದ ಐದು ಮರಿಗಳನ್ನು ಹಾಕುತ್ತವೆ. ಅವುಗಳಲ್ಲಿ ಸರಾಸರಿ ಮೂರು ಮರಿಗಳು ಬದುಕುವುದರಿಂದ ಅವುಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗುತ್ತದೆ’ ಎಂದು ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆಯ ಡಾ.ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.