ADVERTISEMENT

ಬಿರುಸುಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 5:55 IST
Last Updated 12 ಜೂನ್ 2017, 5:55 IST

ಕೊಣನೂರು: ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ಭಾಗದಲ್ಲಿ ಮುಂಗಾರು ಮಳೆ ಕಾಲಿಟ್ಟಿದ್ದು  ಕೃಷಿಕರಲ್ಲಿ ಸಂತಸ ಮೂಡಿಸಿದೆ. ಈ ಭಾಗದ ಪ್ರಮುಖ ಬೆಳೆಗಳಾದ ತಂಬಾಕು, ಆಲೂಗೆಡ್ಡೆ, ಮುಸುಕಿನ ಜೋಳದ ಬೆಳೆಗೆ ಪೋಷಣೆ ಕಾರ್ಯ ಚುರುಕುಗೊಂಡಿದೆ.

ಶನಿವಾರ ಬೆಳಿಗ್ಗೆಯಿಂದ ದಟ್ಟ ಮೋಡಗಳಿದು, ತುಂತುರು ಮಳೆ ಬೀಳಲಾರಂಬಿಸಿತು. ಸಂಜೆ ವೇಳೆಗೆ  ಬಿರುಸುಗೊಂಡಿತು. ಕೃಷಿ ಚಟುವಟಿಕೆಗೆ ಉತ್ಸಾಹ ತುಂಬಿದೆ. ಬಿತ್ತನೆ ಮಾಡಿದ್ದ ರಾಗಿ, ಆಲೂಗಡ್ಡೆ, ಮುಸುಕಿನಜೋಳ, ದ್ವಿದಳ ಧಾನ್ಯಗಳು ಹಾಗೂ ಬೆಳವಣಿಗೆ ಹಂತದ ತಂಬಾಕು ಕೃಷಿಗೆ ಇದು ನೆರವಾಗಲಿದೆ ಎಂದ ರೈತರು ಹೇಳುತ್ತಾರೆ.

ಕಳೆದ ವರ್ಷ ಮಳೆ ಕೊರತೆಯಿಂದ ಆಲೂಗೆಡ್ಡೆ ಬೆಳೆ ಇಳುವರಿಯಲ್ಲಿ ವ್ಯತ್ಯಾಸ ಕಂಡು ಬಂದು ರೈತರು ನಷ್ಟ ಅನುಭವಿಸಿದ್ದರು. ಶೇ 50ರಷ್ಟೂ ಬಿತ್ತನೆ ಮಾಡಿರಲಿಲ್ಲ.
ಏಪ್ರಿಲ್ ಕೊನೆಯ ವಾರದಲ್ಲಿ ಕೆಲವೆಡೆ ಉತ್ತಮ ಮಳೆ, ಕಳೆದ ಬಾರಿ ನಷ್ಟವನ್ನು ತುಂಬಿಕೊಳ್ಳಲು ಈಗ ಆಲೂಬೆಳೆ ಬಿತ್ತನೆಗೆ ಮುಂದಾಗಿದ್ದಾರೆ. ಕೊಣನೂರು ಭಾಗದಲ್ಲಿ ಸ್ವಲ್ಪ ಕಡಿಮೆ, ರಾಮನಾಥಪುರ ಹೋಬಳಿಯ ಭಾಗದಲ್ಲಿ ಹೆಚ್ಚಾಗಿ ಆಲೂಬಿತ್ತನೆ ಮಾಡಲಾಗಿದೆ.

ADVERTISEMENT

ಕೆಲ ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯ ಕಾರಣ ಕಾವೇರಿ, ಹಾರಂಗಿ, ಹೇಮಾವತಿ ನದಿಗಳಿಗೆ ನೀರು ಹರಿವು ಹೆಚ್ಚಿದೆ. ಶೇಂಗಾ, ಹೆಸರು, ಉದ್ದು ಇತರ ಬೆಳೆಗಳಿಗೆ ಅನುವಾಗುವಂತೆ ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆ ಎಡದಂಡೆ ಹಾಗೂ ಬಲದಂಡೆ ನಾಲೆಗೆ ನೀರು ಹರಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.

ಹೇಮಾವತಿ ಬಲದಂಡೆ, ಕರಡೀಲಕ್ಕನ ಕೆರೆ ಸೀಳು ನಾಲೆಗಳಿಗೆ ನೀರು ಬಿಟ್ಟು ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸಕಾಲ ಎಂದು ರೈತ ಸಂಘದ ಮುಗಳೂರು ಕೃಷ್ಣೇಗೌಡ ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.