ADVERTISEMENT

ಬಿಸಿಯೂಟ ನೌಕರರ ಅನುದಾನ ಕಡಿತಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 10:31 IST
Last Updated 9 ಜೂನ್ 2017, 10:31 IST

ಹಾಸನ: ಅನುದಾನ ಕಡಿತ ಹಾಗೂ ಬಿಸಿಯೂಟ ಯೋಜನೆ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಜೂನ್ 13 ರಂದು ‘ವಿಧಾನ ಸೌಧ ಚಲೋ’ ಹಮ್ಮಿಕೊಳ್ಳಲಾಗಿದೆ’ ಎಂದು  ಅಕ್ಷರ ದಾಸೋಹ ನೌಕರರ ಸಂಘದ ( ಸಿಐಟಿಯು) ಜಿಲ್ಲಾ ಘಟಕದ ಅಧ್ಯಕ್ಷೆ  ಎಂ.ಬಿ.ಪುಷ್ಪಾ ತಿಳಿಸಿದರು.

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆ ತಂದಿದೆ. ಅದರಲ್ಲಿ ಬಿಸಿಯೂಟ ಯೋಜನೆ ಪ್ರಾಮುಖ್ಯತೆ ಪಡೆದಿದೆ. ಆದರೆ, ಇತ್ತೀಚೆಗೆ ಬಿಸಿಯೂಟ ನೌಕರರ ಹಿತ ಕಾಪಾಡುವಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅಲ್ಲದೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್‌ಎಆರ್‌ಡಿ) ನೌಕರರ ಅನುದಾನ ಖಡಿತ ಮಾಡಿ, ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ  ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ದೇಶದ್ಯಾಂತ ಸುಮಾರು 11.43 ಲಕ್ಷ ಪ್ರಾಥಮಿಕ ಶಾಲೆಗಳಲ್ಲಿ 11 ಕೋಟಿ ಮಕ್ಕಳಿಗೆ ಬಿಸಿಯೂಟ ಯೋಜನೆ ಪ್ರಾರಂಭಿಸಲಾಯಿತು. ನೀತಿ ಆಯೋಗವು ಆಹಾರ, ಆರೋಗ್ಯ, ಶಿಕ್ಷಣ, ಗ್ರಾಮೀಣಭಿವೃದ್ಧಿ, ಉದ್ಯೋಗಖಾತ್ರಿಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಕಡಿತ ಮಾಡಿತು.

ADVERTISEMENT

ಬಿಸಿಯೂಟ ಯೋಜನೆಗೆ ಶೇ  60 ಅನುದಾನ ಕಡಿತ ಮಾಡಿ  ರಾಜ್ಯ ಸರ್ಕಾರಗಳ ಮೇಲೆ ಹೊರೆ ಹಾಕಿದೆ. ಇದನ್ನು  ವಿರೋಧಿಸಿ ದೇಶಾದ್ಯಾಂತ 25 ಲಕ್ಷ ಬಿಸಿಯೂಟ ನೌಕರರು ಹೋರಾಟ ಪ್ರಾರಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿವರಿಸಿದರು.

ಈಗಾಗಲೇ ಇಸ್ಕಾನ್, ಅಕ್ಷಯಪಾತ್ರೆ ಹಾಗೂ ಅದಮ್ಯಚೇತನ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಬಿಸಿಯೂಟ ಯೋಜನೆ ಕೆಲಸ ನಿರ್ವಹಿಸುತ್ತಿವೆ. ಇಸ್ಕಾನ್‌ ಪೂರೈಸುವ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇರುವುದಿಲ್ಲ. ವಾಹನಗಳಲ್ಲಿ ಊಟ ಸರಬರಾಜು ಮಾಡುವ ವೇಳೆಗೆ ತಣ್ಣಗಾಗಿರುತ್ತದೆ.

40 ರಿಂದ 50 ಶಾಲೆಗಳು ಒಂದೇ ಪ್ರದೇಶದಲ್ಲಿ ಅಥವಾ ಒಂದೇ ರಸ್ತೆಯ ಹಾದಿಯಲ್ಲಿ ಬಂದರೆ ಅಷ್ಟು ಶಾಲೆಗಳಿಗೆ ಒಂದೇ ಸ್ಥಳದಿಂದ ಆಹಾರ ಪೂರೈಸುವುದು ‘ಕೇಂದ್ರೀಕೃತ ಅಡುಗೆ ಮನೆ’ ವ್ಯವಸ್ಥೆಯಾಗಿದೆ. ಆ ಶಾಲೆಗಳಲ್ಲಿ ಅಡುಗೆ ಮಾಡುವ ಕನಿಷ್ಠ 100-150 ಜನರು ಕೆಲಸ ಕಳೆದು ಕೊಳ್ಳುತ್ತಾರೆ.

ಅಲ್ಲದೇ, ಈ ಯೋಜನೆ ಜಾರಿಯಿಂದ  ಲಕ್ಷಾಂತರ ಮಹಿಳೆಯರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ  ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಲಾವತಿ, ಡಿ.ಎಲ್‌. ನಾಗರಾಜು, ಖಜಾಂಚಿ ಸೌಮ್ಯ, ಕಾರ್ಯದರ್ಶಿ ಜ್ಯೋತಿ, ಉಪಾಧ್ಯಕ್ಷೆ ಯಶೋದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.