ADVERTISEMENT

ಬೆಳಗದ ದೀಪ, ರಸ್ತೆ ಮೇಲೆ ಚರಂಡಿ ನೀರು

ಕೆ.ಎಸ್.ಸುನಿಲ್
Published 16 ಜನವರಿ 2017, 6:10 IST
Last Updated 16 ಜನವರಿ 2017, 6:10 IST
ಖಾಲಿ ನಿವೇಶನದಲ್ಲಿ ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿಗಳು
ಖಾಲಿ ನಿವೇಶನದಲ್ಲಿ ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿಗಳು   

ಹಾಸನ: ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಬೆಳಗದ ಬೀದಿದೀಪ, ಎಲ್ಲೆಂದರಲ್ಲಿ ಕಸದ ರಾಶಿ, ಖಾಲಿ ನಿವೇಶನದಲ್ಲಿ ಅಲೆಮಾರಿಗಳ ಬಿಡಾರ...
ಇದು ನಗರದ ಹೊಸ ಬಸ್‌ನಿಲ್ದಾಣ ಎದುರಿನ ಚನ್ನಪಟ್ಟಣ ಕೆಎಚ್‌ಬಿ ಕಾಲೊನಿಯ ದುಸ್ಥಿತಿ.

ಹೆಸರಿಗೆ ನಗರದ ಪ್ರತಿಷ್ಠಿತ ಕಾಲೊನಿಗಳಲ್ಲಿ ಒಂದಾಗಿದೆ. ಎದುರಿಗೆ ಹೊಸ ಬಸ್‌ ನಿಲ್ದಾಣ, ಪಕ್ಕದಲ್ಲಿಯೇ ನೂತನ ಕೋರ್ಟ್‌ ಕಟ್ಟಡ ಇದೆ. ಆದರೂ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ದಶಕಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿದ ಕಾಲೊನಿ ಪ್ರವೇಶಿ ಸುತ್ತಿದ್ದಂತೆ ಖಾಲಿ ನಿವೇಶನಗಳಲ್ಲಿ ಎದೆಮಟ್ಟ ಬೆಳೆದಿರುವ ಗಿಡ, ಗಂಟಿ ಸ್ವಾಗತಿಸುತ್ತಿವೆ. ಕಸ ಸಂಗ್ರಹಿಸಲು ಕಸದ ತೊಟ್ಟಿ ಇಡದ ಕಾರಣ ಎಲ್ಲೆಂದರಲ್ಲಿ ತ್ಯಾಜ್ಯ ಹಾಕಲಾಗಿದೆ.

ಒಳಚರಂಡಿ ವ್ಯವಸ್ಥೆ  ಸಮರ್ಪಕ ವಾಗಿಲ್ಲ.  ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ  ಜನರು ಮೂಗು ಮುಚ್ಚಿಕೊಂಡು ಓಡಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆಗೆ ಇನ್ನೂ ಈ ಕಾಲೊನಿ ಹಸ್ತಾಂತರಿಸಿಲ್ಲ. ಬಡಾವಣೆ ನಿವಾಸಿಗಳು ಈಗಲೂ ಗೃಹ ಮಂಡಳಿಗೆ ತೆರಿಗೆ ಪಾವತಿ ಸುತ್ತಿದ್ದಾರೆ. ತೆರಿಗೆ ಪಾವತಿಸಿದರೂ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಎಂಬುದು ನಿವಾಸಿಗಳ ಆರೋಪ.

ಕಾಲೊನಿಯಲ್ಲಿ ನೂರಾರು ಮನೆ ನಿರ್ಮಾಣಗೊಂಡಿವೆ. ಕೆಲವು ನಿರ್ಮಾಣ ಹಂತದಲ್ಲಿವೆ. ಖಾಲಿ ನಿವೇಶನಗಳಲ್ಲಿ ಅಲೆಮಾರಿಗಳು ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲಿಯೇ ದಿನ ನಿತ್ಯದ ಕರ್ಮ ಪೂರೈಸಿಕೊಳ್ಳುತ್ತಿದ್ದಾರೆ.  ಹೀಗಾಗಿ, ಸುತ್ತಮುತ್ತಲಿನ ಜಾಗ ಗಲೀಜಿನಿಂದ ಕೂಡಿದೆ.

ರಸ್ತೆಗಳ ಸ್ಥಿತಿಯಂತೂ ಹೇಳ ತೀರದು. ಡಾಂಬರು ಕಾಣದೆ ಹಲವು ವರ್ಷಗಳೇ ಕಳೆದಿವೆ. ಕಳಪೆ ಕಾಮಗಾರಿ ಯಿಂದಾಗಿ ರಸ್ತೆಗಳ ತುಂಬಾ ಗುಂಡಿಗಳು ಬಿದ್ದಿವೆ. ಹೀಗಾಗಿ, ವಾಹನ ಸಂಚಾರ ದುಸ್ತರವಾಗಿದೆ. ನಿವಾಸಿಗಳು ಗೃಹ ಮಂಡಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

‘ಕಾಲೊನಿಗೆ ಮೂಲಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಗೃಹ ಮಂಡಳಿಗೆ ಮನವಿ ಮಾಡಿದ್ದೇವೆ. ಹೆಸರಿಗೆ ಮಾತ್ರ ಬೀದಿದೀಪ ಅಳವಡಿಸ ಲಾಗಿದೆ. ಆದರೆ, ಅವು ಬೆಳಗುವುದಿಲ್ಲ. ರಾತ್ರಿ ವೇಳೆ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಓಡಾಡಲು ಭಯ ಪಡು ವಂತಹ ವಾತಾವರಣ ಇಲ್ಲಿದೆ. ನಿವಾಸಿ ಗಳಿಗೆ ಭದ್ರತೆಯೇ ಇಲ್ಲ. ಹಲವು ಬಾರಿ ಮನೆಗಳವು  ಪ್ರಕರಣ ವರದಿಯಾಗಿದೆ’ ಎಂದು ಇಲ್ಲಿನ ನಿವಾಸಿ ಮಂಜು ಆರೋಪಿಸಿದರು.

‘ಕಾಲೊನಿಯಲ್ಲಿ ಶೇ 60 ಖಾಲಿ ನಿವೇಶನ ಇವೆ. ನಿವೇಶನ ಮಾಲೀಕರು ಗಿಡ–  ಗಂಟಿ ಸ್ವಚ್ಛಗೊಳಿಸಿಕೊಳ್ಳಬೇಕು. ಯಾರೂ ನಿರ್ವಹಣೆ ವೆಚ್ಚ  ಪಾವತಿಸು ತ್ತಿಲ್ಲ. ವಿದ್ಯುತ್‌ ಬಿಲ್‌ ಒಂದು ಲಕ್ಷ ಬರುತ್ತದೆ. ಹಂತ ಹಂತವಾಗಿ ಕಾಲೊನಿಗೆ ಸೌಲಭ್ಯ ಕಲ್ಪಿಸಲಾಗುವುದು. ಕೊಳವೆ ಬಾವಿ ಕೊರೆಸಲಾಗಿದೆ. ನಗರಸಭೆಗೆ ಕಾಲೊನಿ ಹಸ್ತಾಂತರಿಸಲು ಸಿದ್ಧ. ಆದರೆ, ಈ ಸಂಬಂಧ ನಗರಸಭೆಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ’ ಎಂದು ಗೃಹ ಮಂಡಳಿ ಸಹಾಯಕ ಎಂಜಿನಿಯರ್‌ ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.