ADVERTISEMENT

ಮನೆ ಬಾಗಿಲಿಗೆ ಆರೋಗ್ಯ ಸೇವೆ

ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:07 IST
Last Updated 10 ಮಾರ್ಚ್ 2018, 7:07 IST
ಮನೆ ಬಾಗಿಲಿಗೆ ಆರೋಗ್ಯ ಸೇವೆ
ಮನೆ ಬಾಗಿಲಿಗೆ ಆರೋಗ್ಯ ಸೇವೆ   

ಹಾಸನ: ಆರೋಗ್ಯ ಇಲಾಖೆ ಸೇವೆಯನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯೇಂದ್ರ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಆರ್.ಸಿ.ಎಚ್. ತಂತ್ರಾಂಶ ಮತ್ತು ಅನ್ ಮೋಲ್ ತಂತ್ರಾಂಶ ಅನುಷ್ಠಾನಗೊಳಿಸುವ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಆರೋಗ್ಯ ಇಲಾಖೆ ಪ್ರಗತಿ ಸಾಧಿಸಲು   ಆರೋಗ್ಯ ಸಹಾಯಕರ ಪರಿಶ್ರಮ ಕಾರಣ. ಏಕೆಂದರೆ ಸಮುದಾಯದ ಜನರಿಗೆ ಸಿಗುವ ಸೌಲಭ್ಯಗಳ ಮಾಹಿತಿ ತಿಳಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಯಾವ ಇಲಾಖೆ ಸಿಬ್ಬಂದಿಯೂ ಮನೆ ಬಾಗಿಲಿಗೆ ಹೋಗಿ ಹೇಳುವುದಿಲ್ಲ. ಅಂತಹ ಕೆಲಸವನ್ನು ಇಲಾಖೆಯಲ್ಲಿ ಮಾಡುತ್ತಿರುವುದರಿಂದ ರಾಜ್ಯದ ಜನರ ಆರೋಗ್ಯವನ್ನು ಕಾಯುವಂತಹ ಹೊಣೆಗಾರಿಕೆ ನಮ್ಮದಾಗಿದೆ’ ಎಂದರು.

ADVERTISEMENT

‘ನಮ್ಮ ಕೆಲಸ ಚಿಕ್ಕದಿರಬಹುದು. ಆದರೆ ಅದನ್ನು ಕೀಳರಿಮೆ ಎಂದು ಭಾವಿಸಬಾರದು. ಹೊಳೆನರಸೀಪುರ ದಲ್ಲಿ ವೈದ್ಯಾಧಿಕಾರಿಯಾಗಿ ಹನ್ನೆರಡು ವರ್ಷ ಸೇವೆ ಮಾಡಿ ನಂತರದ ದಿನಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಕಾರ್ಯಕ್ರಮಗಳ ಅಧಿಕಾರಿ ಹಾಗೂ ಇಂದು ಜಿಲ್ಲಾ ಆರೋಗ್ಯಾಧಿಕಾರಿ ಆಗಿರುವುದು ಸಂತಸ ತಂದಿದೆ’ ಎಂದು ನುಡಿದರು.

ಆರೋಗ್ಯ ಇಲಾಖೆಯಲ್ಲಿನ ಅನೇಕ ಸಮಸ್ಯೆಗಳಾದ ವೇತನ ವಿಳಂಬ, ಹೆಚ್ಚುವರಿ ಪ್ರಭಾರದ ಕೆಲಸಗಳ ಬಗ್ಗೆ ಅರಿವಿದೆ. ಹಾಗಾಗಿ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾ ಮೇಲ್ವಿಚಾರಕ ವಿನಯ್ ಅವರು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಆರೋಗ್ಯಾಧಿಕಾರಿಗೆ ಅಭಿನಂದನೆ ತಿಳಿಸಿದರು.

ಕಾರ್ಯಾಗಾರ ದಲ್ಲಿ ಹೊಳೆನರಸೀಪುರ ಹಾಗೂ ಅರಕಲಗೂಡು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಆಶಾ ಕಾರ್ಯಕರ್ತೆಯರು, ಹಿರಿಯ, ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು, ಗಣಕಯಂತ್ರ ಸಹಾಯಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.