ADVERTISEMENT

ಮೂಲಸೌಲಭ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:47 IST
Last Updated 23 ಜುಲೈ 2017, 9:47 IST

ಹಾಸನ: ವಸತಿ ನಿಲಯಗಳಿಗೆ ಮೂಲ ಸೌಲಭ್ಯ ಒದಗಿಸದೆ ಅವ್ಯವಹಾರ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ನ (ಎಸ್‌ಎಫ್‌ಐ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 

ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ನೂರಾರು  ವಿದ್ಯಾರ್ಥಿಗಳು ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ ವ್ಯವಸ್ಥೆ ಹಾಗೂ ಮೂಲ ಸವಲತ್ತು ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೇಲ್‌ಗಳಲ್ಲಿ ಸಮಾಜದ   ಎಸ್‌.ಸಿ, ಎಸ್‌.ಟಿ ಸಮುದಾಯದ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ನರ್ಸಿಂಗ್, ಪ್ಯಾರಾ ಮೆಡಿಕಲ್‌, ಪಿಯುಸಿ, ಬಿ.ಇಡಿ, ಸ್ನಾತಕೋತ್ತರ ಹಾಗೂ ಪದವಿ ಮುಂತಾದ ವಿಭಾಗಗಳ ವಿದ್ಯಾರ್ಥಿಗಳಿದ್ದು, ಸ್ಥಳಾವಕಾಶದ ಕೊರತೆಯಿಂದ ಶೈಕ್ಷಣಿಕ ಚುಟುವಟಿಕೆಗಳಿಗೆ ಸಮಸ್ಯೆ ಉಂಟಾಗಿದೆ ಎಂದು ದೂರಿದರು.

ADVERTISEMENT

‘ಕೆಲ ದಿನಗಳ ಹಿಂದಷ್ಟೇ ಕಳಪೆ ಗುಣಮಟ್ಟದ ಆಹಾರ ತಯಾರಿಕೆ, ಅಡುಗೆಗೆ ಕೊಳೆತ ತರಕಾರಿ ಬಳಕೆ, ಜಾತಿ ನಿಂದನೆ ಹಾಗೂ ವಸತಿ ನಿಲಯದ ಮೇಲ್ವಿಚಾರಕರ ವರ್ತನೆ ಖಂಡಿಸಿ ಪ್ರತಿಭಟನೆ ಮಾಡಿ ವಾರ ಕಳೆದಿದ್ದರೂ ಇದುವರೆಗೂ ಸುಧಾರಣೆಗಳು ಆಗಿಲ್ಲ. ಅಲ್ಲದೇ, ಮೇಲ್ವಿಚಾರಕರ ವರ್ತನೆಯಲ್ಲೂ ಬದಲಾವಣೆಗಳು ಕಂಡು ಬಂದಿಲ್ಲ. ಅವರು ಮತ್ತೆ ಹಲವು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದು, ಮೂಲ ಸೌಲಭ್ಯ ನೀಡದೆ ವಂಚಿಸುತ್ತಿರುವುದು ಕಂಡು ಬಂದಿದೆ’ ಎಂದು ಆರೋಪಿಸಿದರು.

‘ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಹಾಸಿಗೆ, ದಿಂಬು, ಹೊದಿಕೆ, ಸೊಳ್ಳೆ ಪರದೆ, ಫೇಸ್ಟ್‌, ಬ್ರೆಷ್, ಸೋಪು, ಪುಸ್ತಕಗಳು ಹಾಗೂ ಆಟಿಕೆ ವಸ್ತುಗಳನ್ನು ಕೊಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೂಡಲೇ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳ ಸ್ವಂತಃ ಕಟ್ಟಡ ಪ್ರಾರಂಭಿಸಬೇಕು. ಗುಣಮಟ್ಟದ ಆಹಾರ ಪೂರೈಸಬೇಕು. ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕಾದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆ ನೀಡಬೇಕು.

ನಿಲಯಗಳಿಗೆ ಮೂರು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪ್ರತಿ ತಿಂಗಳು ತಪ್ಪದೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಆಹಾರ ಫಲಕವನ್ನು ಬದಲಾಯಿಸಿ ಹೊಸ ಪಟ್ಟಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ಮಹೇಶ್‌, ಮಮಿತಾ, ಶಾಲಿನಿ, ರೇಖಾ, ವೈಶಾಲಿ, ಬೇಬಿ, ಚೇತನಕುಮಾರಿ, ಸವಿತಾ, ಸೌಮ್ಯಾ, ಶಾಲಿನಿ, ಪೂಜಾ, ಮಮತಾ, ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.