ADVERTISEMENT

ವಚನಗಳು ಸ್ವತಂತ್ರ ಸಾಹಿತ್ಯ, ಅನುಕರಣೆಯಲ್ಲ: ಚಿಮೂ

ತರಳಬಾಳು ಹುಣ್ಣಿಮೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 6:12 IST
Last Updated 29 ಜನವರಿ 2015, 6:12 IST

ಜೆ.ಎಚ್. ಪಟೇಲ್‌ ವೇದಿಕೆ, ಚನ್ನಗಿರಿ: ವಚನಗಳು ಸಿದ್ಧಾಂತ ಶಿಖಾಮಣಿಯ ಅನುಕರಣೆ ಎಂದು ಕೆಲವು ಶಿಖಾಮಣಿಗಳು ಹೇಳುತ್ತಿದ್ದಾರೆ. ಆದರೆ ವಚನ ಸಾಹಿತ್ಯ ಸ್ವತಂತ್ರವಾದ ಸಾಹಿತ್ಯವೇ ಹೊರತು ಯಾವುದೇ ಶಿಖಾಮಣಿಯ ಅನುಕರಣೆಯಲ್ಲ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಪ್ರತಿಪಾದಿಸಿದರು.

ಪಟ್ಟಣದ ಚಿತ್ರದುರ್ಗ ರಸ್ತೆ ಗರಗ ಕ್ರಾಸ್‌ನಲ್ಲಿ ‘ತರಳಬಾಳು ಹುಣ್ಣಿಮೆ ಮಹೋತ್ಸವ–2015’ ಮೂರನೇ ದಿನ ಬುಧವಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯ ಇಂದಿಗೂ ಎಲ್ಲರಿಗೂ ಅಚ್ಚುಮೆಚ್ಚಾಗಿ ಸ್ಫೂರ್ತಿದಾಯಕವಾಗಿವೆ. 12ನೇ ಶತಮಾನದಲ್ಲಿ ಸುಪ್ತಾವಸ್ಥೆಯಲ್ಲಿದ್ದ ಇಡೀ ಜನಾಂಗವನ್ನು ಬಡಿದೆಬ್ಬಿಸಿದವರು ಬಸವಣ್ಣನವರು. ಈ ಯುಗದಲ್ಲಿ ಆ ಕಾರ್ಯವನ್ನು ಸಿರಿಗೆರೆ ಶ್ರೀಗಳು ಮಾಡುತ್ತಿದ್ದಾರೆ. ಹಿಂದಿನ ಪರಂಪರೆಯನ್ನು ಯಾವತ್ತೂ ಮರೆಯಬಾರದು. ಆ ಪರಂಪರೆ ನಮಗೆ ಸ್ಫೂರ್ತಿಯನ್ನು ಕೊಡುತ್ತದೆ. ವಚನ ಸಾಹಿತ್ಯದಂತಹ ಶ್ರೇಷ್ಠ ಸಾಹಿತ್ಯ ಬೇರೊಂದಿಲ್ಲ. ವಚನಗಳು ಜನಮನದಲ್ಲಿ ಇನ್ನೂ ಉಳಿದಿವೆ. ಶ್ರೇಷ್ಠವಾದ ಪರಂಪರೆಯನ್ನು ವಚನ ಸಾಹಿತ್ಯ ಹೊಂದಿದೆ ಎಂದರು.

‘ನಾನು ಕೂಡಾ ಇದೇ ತಾಲ್ಲೂಕಿನಲ್ಲಿ ಜನಿಸಿದವನು. ಅತ್ಯಂತ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಐತಿಹಾಸಿಕ ತಾಲ್ಲೂಕು ಇದಾಗಿದೆ. ಇಂತಹ ಐತಿಹಾಸಿಕ ತಾಲ್ಲೂಕಿನಲ್ಲಿ ಎರಡನೇ ಬಾರಿ ಹುಣ್ಣಿಮೆ ಮಹೋತ್ಸವ ನಡೆಸುತ್ತಿರುವುದು ಈ ಭಾಗದ ಜನರ ಅದೃಷ್ಟವಾಗಿದೆ.

ಚನ್ನಗಿರಿಗೆ ಹಿಂದೆ ಇದ್ದ ಹೆಸರು ‘ಹುಲಿಕೆರೆ’ ಎಂದು. ಮುಂದೆ ಕೆಳದಿ ರಾಣಿ ಚನ್ನಮ್ಮ ಈ ಭಾಗದಲ್ಲಿ ರಾಜ್ಯಭಾರ ಮಾಡಿದ್ದರಿಂದ ‘ಚನ್ನಗಿರಿ‘ ಎಂಬ ಹೆಸರು ಬಂದಿತು. ಈ ತಾಲ್ಲೂಕಿನ ಸಂತೇಬೆನ್ನೂರಿನ ಪುಷ್ಕರಣಿಯ ಹತ್ತಿರ ಇರುವ ಮಸೀದಿಯ ಹಿಂದೆ ಭಗ್ನಗೊಂಡ ಶಾಸನ, ಮೆದಿಕೆರೆಯಲ್ಲಿ ಶಾಸನ, ಹಿರೇಕೋಗಲೂರು ಗ್ರಾಮದಲ್ಲಿ ವೀರಗಲ್ಲುಗಳು, ತೋಪೇನಹಳ್ಳಿಯಲ್ಲಿ ಮಾಸ್ತಿಕಲ್ಲುಗಳು, ತ್ಯಾವಣಿಗೆಯಲ್ಲಿ ಶಾಸನಗಳು ಇವೆ’ ಎಂದು ತಾಲ್ಲೂಕಿನ ಇತಿಹಾಸದ ಬಗ್ಗೆ ತಿಳಿಸಿದರು.

ವ್ಯಕ್ತಿತ್ವ ವಿಕಸನ: ವ್ತಕ್ತಿತ್ವ ವಿಕಸನ ಕುರಿತು ಡಾ.ಭರತ್ ಚಂದ್ರ ಮಾತನಾಡಿದರು. ರಕ್ತದ ಒತ್ತಡ ಕುರಿತು ಡಾ.ಬಿ.ಎಂ ವಿಶ್ವನಾಥ್ ಮಾತನಾಡಿ, ಜೀವನದಲ್ಲಿ ಮಾನಸಿಕ ಒತ್ತಡ ಇರಬಾರದು. ಮನುಷ್ಯನಿಗೆ ಮಧುಮೇಹ ಮತ್ತು ರಕ್ತದ ಒತ್ತಡ ಕಾಯಿಲೆಗಳು ಸಾಮಾನ್ಯವಾದ ಅವಳಿ ಕಾಯಿಲೆಗಳಾಗಿವೆ. ಇವು ಮನುಷ್ಯನನ್ನು ನಿಶ್ಶಬ್ದವಾಗಿ ಕೊಲ್ಲುತ್ತವೆ. ಅತಿಯಾದ ಟಿವಿ ವೀಕ್ಷಣೆ, ಧೂಮಪಾನ, ಮದ್ಯಪಾನ, ಇತಿಮಿತಿಯಿಲ್ಲದ ಆಹಾರ ಸೇವನೆ, ಮೊಬೈಲ್‌ ಬಳಕೆ, ವಾಹನಗಳ ಸವಾರಿಯಿಂದ ಈ ಕಾಯಿಲೆಗಳು ಬರುತ್ತವೆ. ಆದ್ದರಿಂದ ವ್ಯಾಯಾಮ, ಯೋಗ, ಧ್ಯಾನ, ಕ್ರೀಡೆಗಳಿಂದ ಈ ಕಾಯಿಲೆಗಳನ್ನು ದೂರ ಇಡಲು ಸಾಧ್ಯ ಎಂದರು.

ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ವಿ. ಸನತ್, ಕವಿತಾ ಎಸ್‌. ಉಂಡೋಡಿ, ಶಾಸಕ ವಡ್ನಾಳ್ ರಾಜಣ್ಣ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಚ್.ಎಸ್. ಶಿವಕುಮಾರ್, ಆರ್.ಎಂ. ರವಿ, ಇಂದುಮತಿ ಸಾಲಿಮಠ ಉಪಸ್ಥಿತರಿದ್ದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಾ.ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಪಶ್ಚಿಮ ಬಂಗಾಳದ ಕಲಾವಿದರ ತಂಡ ಮಹಿಷಾಸುರ ಮರ್ದಿನಿ ನೃತ್ಯ. ಪಂಜಾಬ್ ಕಲಾವಿದರಿಂದ ಬಾಂಗ್ಡಾ ಹಾಗೂ ಗುಜರಾತ್‌ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.