ADVERTISEMENT

ವಿದೇಶಿ ಪ್ರವಾಸಿಗರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 9:04 IST
Last Updated 28 ಸೆಪ್ಟೆಂಬರ್ 2016, 9:04 IST

ಬೇಲೂರು: ‘ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ವಿದೇಶದಿಂದ ಬರುವ ಪ್ರವಾಸಿಗರು ಆ ದೇಶದ ಸಂಸ್ಕೃತಿಯನ್ನು ಹೊತ್ತು ತರುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ವಿ.ಚೈತ್ರಾ ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಇಲ್ಲಿನ ಚನ್ನಕೇಶವ ದೇಗುಲದ ಮುಂಭಾಗ ಮಂಗಳವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಎಂದರೆ ‘ದೇಶ ನೋಡು–ಕೋಶ ಓದು’ ಎಂಬ ನಾಣ್ಣುಡಿಯಾಗಿದೆ. ದೇಶ ಸುತ್ತುವು ದರಿಂದ ಕೋಶ ಓದುವುದರಿಂದ ಒಬ್ಬ ವ್ಯಕ್ತಿ ಜ್ಞಾನವಂತನಾಗಲು, ಶಿಕ್ಷಿತ ನಾಗರಿಕನಾಗಲು ಸಾಧ್ಯ. ದೇಶ, ವಿದೇಶಗಳಿಂದ ಇಲ್ಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗ ತನ್ನ ದೇಶದ ಸಂಸ್ಕೃತಿ, ಪರಂಪರೆಯನ್ನು ಇಲ್ಲಿಗೆ ಹೊತ್ತು ತರುತ್ತಾನೆ. ಅದೇ ರೀತಿ ಇಲ್ಲಿನ ಸಂಸ್ಕೃತಿ, ಇತಿಹಾಸ ಕಲೆಯನ್ನು ತನ್ನ ದೇಶದಲ್ಲಿ ವೈಭವದಿಂದ ಪ್ರದರ್ಶಿಸುತ್ತಾನೆ. ಈ ಕಾರಣದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

‘ನಾನು 4ನೇ ತರಗತಿ ವ್ಯಾಸಂಗ ಮಾಡುವಾಗ ಬೇಲೂರು ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿದ್ದೇ. ಈಗ ಜಿಲ್ಲಾಧಿಕಾರಿಯಾಗಿ ಇದೇ ಸ್ಥಳಕ್ಕೆ ಬಂದಿದ್ದೇನೆ. ಪ್ರವಾಸೋದ್ಯಮ ನನ್ನ ಹವ್ಯಾಸ’ ಎನ್ನುತ್ತಾ ಬಾಲ್ಯದ ದಿನಗಳನ್ನು ನೆನೆದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ವೈ.ಎನ್‌.ರುದ್ರೇಶ್‌ಗೌಡ ಮಾತನಾಡಿ ‘ಪ್ರವಾಸಿ ಕೇಂದ್ರವಾಗಿರುವ ಬೇಲೂರು ಹಲವು ಮೂಲ ಸಮಸ್ಯೆಗಳಿಂದ ಬಳಲುತ್ತಿದೆ. ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಬರಲಿದೆ. ಬೇಲೂರು–ಹಳೇಬೀಡು ಅಭಿವೃದ್ಧಿಗೂ ಈ ವೇಳೆ ಹೆಚ್ಚಿನ ಒತ್ತು ನೀಡಬೇಕು. ಬೇಲೂರು ಚನ್ನಕೇಶವ ದೇಗುಲದ ಮುಂಭಾಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ಅವೈಜ್ಞಾನಿಕವಾಗಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವು ಮಾಡಲು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎ. ಜಮಾಲುದ್ದೀನ್‌ ಮಾತನಾಡಿ, ‘ಬೇಲೂರು ದೇವಾಲಯದ ಮುಂಭಾಗ ಪಾರ್ಕಿಂಗ್‌ ಸಮಸ್ಯೆ ತೀವ್ರವಾಗಿದೆ. ದೇಗುಲದ ಹಿಂಭಾಗ ಇರುವ ಜಾಗವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಜತೆಗೆ ಕನ್ನಡದ ಪ್ರಥಮ ಶಿಲಾ ಶಾಸನ ದೊರಕಿದ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮವನ್ನು ಪ್ರವಾಸಿ ಕೇಂದ್ರಗಳ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ), ಉಪಾಧ್ಯಕ್ಷ ಅರುಣ್‌ ಕುಮಾರ್‌, ತಹಶೀಲ್ದಾರ್‌ ಪುಟ್ಟಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ್‌, ಫುಡ್‌ ಕ್ರಾಫ್ಟ್‌ ಇನ್‌ಸ್ಟಿಟ್ಯೂಟ್‌ನ ಶ್ರೀಧರ್‌, ಪ್ರವಾಸೋದ್ಯಮ ಇಲಾಖೆ ಸಲಹೆಗಾರ ಟಿ.ಡಿ.ತಮ್ಮಣ್ಣಗೌಡ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.