ADVERTISEMENT

ವೀರೇಂದ್ರ ಹೆಗ್ಗಡೆಗೆ ‘ಧರ್ಮ ಮಹಿಮಾ ವಿಸ್ತಾರಕ ರತ್ನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 8:49 IST
Last Updated 30 ಡಿಸೆಂಬರ್ 2017, 8:49 IST

ಶ್ರವಣಬೆಳಗೊಳ: ಧರ್ಮವನ್ನು ಕಣ್ಣಿಂದ ನೋಡಲು ಸಾಧ್ಯವಿಲ್ಲ. ಅದು ಮಾತು ಮತ್ತು ಕೃತಿಯಲ್ಲಿ ಇರಬೇಕು ಎಂದು ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ 50ನೇ ವರ್ಷದ ಪಟ್ಟಾಭಿಷೇಕದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರೇಂದ್ರ ಹೆಗ್ಗಡೆ ಧರ್ಮಸ್ಥಳಕ್ಕೆ ಮಾತ್ರ ಸೀಮಿತವಾಗದೇ ಅವರ ವ್ಯಾಪ್ತಿ ವಿಶ್ವದಾದ್ಯಂತ ಹರಡಿದೆ. ಕರ್ತವ್ಯದಲ್ಲಿ ನಿಷ್ಠೆಯಿಟ್ಟು ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಧರ್ಮದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ 50ನೇ ಪಟ್ಟಾಭಿಷೇಕದ ಪ್ರಯುಕ್ತ 108 ತ್ಯಾಗಿಗಳ ಸಮ್ಮುಖದಲ್ಲಿ ಧರ್ಮ ಮಹಿಮಾ ವಿಸ್ತಾರಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ, ‘ನನ್ನ ಪಟ್ಟಾಭಿಷೇಕ ಮತ್ತು ಚಾರುಕೀರ್ತಿ ಸ್ವಾಮೀಜಿ ದೀಕ್ಷೆ ನಡುವೆ 6 ತಿಂಗಳು ಅಂತರ. ಅವರು ಪಟ್ಟಾಭಿಷೇಕದ ಬಳಿಕ ಧರ್ಮಸ್ಥಳಕ್ಕೆ ಬಂದಾಗ ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದ ಕೀರ್ತಿ ಧರ್ಮಸ್ಥಳಕ್ಕೆ ಇದೆ. ಈ 50 ವರ್ಷಗಳಿಂದ ಧರ್ಮ ಕಾರ್ಯ ಮಾಡಲು ಜೈನ ಧರ್ಮದ ಪ್ರೇರಣೆ ಜತೆಗೆ ಕ್ಷೇತ್ರದ ಮಂಜುನಾಥ ಸ್ವಾಮಿ ಅವಕಾಶ ನೀಡಿದ್ದಾರೆ’ ಎಂದರು.

ADVERTISEMENT

ವರ್ಧಮಾನ ಸಾಗರ ಮಹಾರಾಜರು ಮಾತನಾಡಿ, ರಾಷ್ಟ್ರದಲ್ಲಿಯೇ ಆದರ್ಶ ವ್ಯಕ್ತಿಯಾಗಿ ದೇವ, ಗುರು, ಶಾಸ್ತ್ರದಲ್ಲಿ ನಂಬಿಕೆ ಇಟ್ಟು ಅಹಂಕಾರವಿಲ್ಲದೇ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಚಂದ್ರಪ್ರಭ ಸಾಗರ ಮಹಾರಾಜರು ಹೆಗ್ಗಡೆ ಅವರಿಗೆ ಸ್ಪಟಿಕ ಜಿನ ಬಿಂಬ ಅರ್ಪಿಸಿದರು. ತ್ಯಾಗಿಗಳ ಆಹಾರ ಸೇವಾ ಸಮಿತಿಗೆ ₹ 5 ಲಕ್ಷ ಚೆಕ್‌ ಅನ್ನು ವೀರೇಂದ್ರ ಹೆಗ್ಗಡೆ ನೀಡಿದರು.

ಶೇಡಬಾಳದಿಂದ ಶ್ರೀ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಬಂದ ಸುಬಲ್‌ ಸಾಗರ ಮಹಾರಾಜರ ಶಿಷ್ಯರಾದ ಆಚಾರ್ಯ ದೇವಸೇನ ಮಹಾರಾಜರು, ಸ್ವಾತ್ಮಾನಂದಿ ಮಹಾರಾಜರು, ಜಿನಸೇನ ಮಹಾರಾಜರು, ಸುತಿಮತಿ ಮಾತಾಜಿ, ಅಜಿತಮತಿ ಮಾತಾಜಿ ಅವರನ್ನು ಚಾರುಕೀರ್ತಿ ಶ್ರೀ ಅವರು ಪಾದಪೂಜೆ ನೆರವೇರಿಸಿ ಸ್ವಾಗತಿಸಿದರು.

ವಾಸುಪೂಜ್ಯ ಸಾಗರ ಮಹಾರಾಜರು, ದೇವಸೇನ ಮಹಾ ರಾಜರು, ಸ್ವಾತ್ಮಾನಂದಿ ಮಹಾರಾಜರು, ಜಿನಸೇನ ಮಹಾರಾಜರು, ಚಂದ್ರಪ್ರಭ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು, ಮಾತಾಜಿ ವೃಂದದವರು ಸಾನಿಧ್ಯ ವಹಿಸಿದ್ದರು. ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಸಹ ಅಧ್ಯಕ್ಷ ಕೆ.ಅಭಯಚಂದ್ರ ಜೈನ್‌, ಡಿ.ಸುರೇಂದ್ರಕುಮಾರ್‌ ಹೆಗ್ಗಡೆ, ಎಸ್‌.ಜಿತೇಂದ್ರಕುಮಾರ್‌, ನಿರ್ಮಲ್‌ಕುಮಾರ್‌ ಸೇಠಿ, ಶ್ರೀಪಾಲ್‌ ಗಂಗವಾಲ್‌ ಇದ್ದರು.

ಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

ಶ್ರವಣಬೆಳಗೊಳ : ಗೊಮ್ಮಟನಗರದಲ್ಲಿ ಡಿ. 30, 31ರಂದು ನಡೆಯಲಿರುವ ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಅದ್ಧೂರಿಯಾಗಿ ಮಾಡಲಾಯಿತು.

ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಮುಂಭಾಗದಿಂದ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸರ್ವಾಧ್ಯಕ್ಷ ಬೆಳಗಾವಿಯ ಸಾಹಿತಿ ಜಿನದತ್ತ ದೇಸಾಯಿ ದಂಪತಿಗೆ ಹೂವಿನ ಹಾರ ಹಾಕಿ, ಸಾರೋಟ್‌ನಲ್ಲಿ ಕುಳ್ಳಿರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಕಲಾ ತಂಡಗಳಾದ ಗಾಲಿ ವಾದನ, ಚಿಟ್ಟಿಮೇಳ, ಮೈಸೂರು ಬ್ಯಾಂಡ್‌ ಸೆಟ್‌, ಕನ್ನಡ ಮತ್ತು ಜೈನ ಧರ್ಮ ಧ್ವಜಗಳನ್ನು ಹಿಡಿದ ಬಾಲಕರು, ಕಲಶ ಹೊತ್ತ ಮಹಿಳೆಯರು, ಮಹಾ ಮಸ್ತಕಾಭಿಷೇಕ ಮಹೋತ್ಸವದ ಧರ್ಮ ಪ್ರಭಾವನಾ ರಥ, ಪ್ರತಿಷ್ಠಾಪಿಸಲ್ಪಟ್ಟ ಕಲಶವಿದ್ದ ವಾಹನ, ಮಂಗಳವಾದ್ಯ, ಸ್ಯಾಕ್ಸೋಫೋನ್‌ ವಾದನ ಮತ್ತು ಪೂರ್ಣ ಕುಂಭ ಕಲಶದೊಂದಿಗೆ ಸಾರ್ವಜನಿಕರು ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.