ADVERTISEMENT

ವೇತನ ಪರಿಷ್ಕರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 9:24 IST
Last Updated 21 ಜೂನ್ 2017, 9:24 IST

ಹಾಸನ: ಪಿಂಚಣಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಎಸ್‌ಎನ್‌ಎಲ್ ಅಧಿಕಾರಿ ನೌಕರರ ಒಕ್ಕೂಟ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.

ಅಧಿಕಾರಿ ಮತ್ತು ನೌಕರರ ವೇತನ ಪರಿಷ್ಕರಣೆ 2007ರ ಜ.1ರಿಂದಲೇ ಆಗಬೇಕಿದೆ. ಸಂಘಟನೆಗಳ ಅನೇಕ ಮನವಿಗಳ ನಂತರವೂ ಸಂಬಂಧಪಟ್ಟ ಸಚಿವಾಲಯದಿಂದ ಆದೇಶವಾಗದ ಕಾರಣ ವೇತನ ಪರಿಷ್ಕರಣೆ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ವೇತನ ಪರಿಷ್ಕರಣೆ ಮಾಡದೇ ನೌಕರರು ಹಾಗೂ ಅಧಿಕಾರಿಗಳನ್ನು ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಿ ನೌಕರರ ವೇತನ ಆಯೋಗದ ವರದಿ ಜಾರಿಯಾಗಿದೆ. ಆದರೆ ಬಿಎಸ್‌ಎನ್‌ಎಲ್‌ ನೌಕರರ ವೇತನ ಪರಿಷ್ಕರಣೆ ಮಾತ್ರ ಇನ್ನೂ ಆಗಿಲ್ಲ. 3ನೇ ವೇತನ ಪರಿಷ್ಕರಣ ಸಮಿತಿ (ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ) ವರದಿಯಲ್ಲಿನ ಆರ್ಥಿಕ ಸಾಮರ್ಥ್ಯದ ಅನುಬಂಧದ ಕಾರಣ ವೇತನ ಪರಿಷ್ಕರಣೆ ನಿರಾಕರಿಸುವುದು ಸೂಕ್ತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸಾರ್ವಜನಿಕ ಉದ್ದಿಮೆಗಳ ಪೈಕಿ ಕೇವಲ ಬಿಎಸ್‌ಎನ್‌ಎಲ್ ಮಾತ್ರ  2000  ರಲ್ಲಿ ದೂರ ಸಂಪರ್ಕ ಇಲಾಖೆಯಿಂದ ಬೇರ್ಪಟ್ಟು ಅಧಿಕಾರಿ ಮತ್ತು ನೌಕರರು ಬಿಎಸ್‌ಎನ್‌ಎಲ್ ನಲ್ಲಿ ನಿಯುಕ್ತರಾಗಿದ್ದಾರೆ. ಹೀಗಾಗಿ ಆರ್ಥಿಕ ಸಾಮರ್ಥ್ಯದ ಕಾರಣ ನೀಡಿರುವುದು ಸಮಂಜಸವಲ್ಲ. 

ವೇತನ ಪರಿಷ್ಕರಣೆ ಜತೆಗೆ ಪಿಂಚಣಿಯೂ ಪರಿಷ್ಕರಣೆ ಮಾಡಬೇಕು. ಆದರೆ, ಕೇಂದ್ರ ಸರ್ಕಾರ ಈವರೆಗೂ ವೇತನ ಪರಿಷ್ಕರಣೆ ಮಾಡುವ ಆದೇಶ ಹೊರಡಿಸದೆ, ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ನೌಕರರು ಸಂಕಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಇದು ಮನವರಿಕೆಯಾಗುತ್ತಿಲ್ಲ ಎಂದು ಕಿಡಿಕಾರಿದರು.

ಬಿಎಸ್‌ಎನ್‌ಎಲ್‌ನಲ್ಲಿ ನೇರ ನೇಮಕವಾದ (ಅ. 1, 2000ರ ನಂತರ) ನೌಕರರು-ಅಧಿಕಾರಿಗಳಿಗೆ ನಿವೃತ್ತಿ  ಸೌಲಭ್ಯ ಶೇ 30ಕ್ಕೆ ನಿಗದಿ ಮಾಡಬೇಕು. ಕಾರ್ಮಿಕ ಸಂಘಟನೆ ಕಾರ್ಯ ಚಟುವಟಿಕೆ ನಿರ್ಬಂಧಿಸು ವಂತಹ ಕೆಲಸ ಮಾಡುವ ಮೂಲಕ ಕೇಂದ್ರ ಸರ್ಕಾರ ಹೋರಾಟದ ಹಕ್ಕು ಹಾಗೂ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಗೋವಿಂದೇಗೌಡ, ಮಾರುತಿ ಇದ್ದರು.

* *

ಬಿಎಸ್‌ಎನ್‌ಎಲ್ ಕೇಂದ್ರದ ಪಿಂಚಣಿ ನಿಧಿಗೆ ಕೊಡುತ್ತಿರುವ ಶ್ರೇಣಿ ಗರಿಷ್ಠ ಮೊತ್ತವನ್ನು ಮೂಲ ವೇತನಕ್ಕೆ ಸೀಮಿತಗೊಳಿಸಬೇಕು
ಎಸ್.ನಾಗರಾಜ್
ಬಿಎಸ್‌ಎನ್‌ಎಲ್ ಅಧಿಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.