ADVERTISEMENT

ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 5:58 IST
Last Updated 29 ಏಪ್ರಿಲ್ 2017, 5:58 IST

ಹಾಸನ: ಪ್ರಸ್ತುತ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಎಚ್.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ  ಸಾಂಸ್ಕೃತಿಕ, ಕ್ರೀಡೆ, ರೆಡ್‌ಕ್ರಾಸ್‌, ಶಾರದಾದೇವಿ ರೇಂಜರ್ಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎನ್‌ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸಂಸದ  ಎಚ್.ಡಿ.ದೇವೇಗೌಡರು ಶಿಕ್ಷಣಕ್ಕೆ ಆದ್ಯತೆ ನೀಡಿದರ ಫಲವಾಗಿ ಇಂದು ಜಿಲ್ಲೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಮಹಿಳೆಯರು ಇಂದು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ.  ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಎಂತಹ ಸಂಕಷ್ಟದಲ್ಲಿಯೂ ಹಿಂದೆ ಸರಿಯಬಾರದು’ ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಿ.ಜಿ. ಕೃಷ್ಣೇಗೌಡ, ‘ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇರುತ್ತದೆ. ನಿರ್ದಿಷ್ಟ  ಗುರಿ ಇಟ್ಟು ಜೀವನದಲ್ಲಿ ಸಾಗಬೇಕು.  ಗುರಿ ತಲುಪಲು ಸಾಧ್ಯವಾಗದಿದ್ದಾಗ ನಿರಾಸೆ ಆಗಬಾರದು. ಆಶಾವಾದಿಗಳಾಗಿ ಬದುಕು ರೂಢಿಸಿಕೊಂಡಾಗ ಮಾತ್ರ ಯಶಸ್ವಿ ಬದುಕು ನಮ್ಮದಾಗುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲರಾದ ಎಚ್.ಆರ್. ಸುಲೋಚನಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಡಿ. ಮುರುಳೀಧರ್  ಮಾತನಾಡಿದರು.  ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪದ್ಮಿನಿ ಶೈಕ್ಷಣಿಕ ವರದಿ ಮಂಡಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಂತಾ ಪಿ.ಆರ್. ಸ್ವಾಗತಿಸಿದರು. ಉಪನ್ಯಾಸಕಿ ಸಿ.ಎನ್.ಕಾವ್ಯಾ ನಿರೂಪಿಸಿದರು.

ADVERTISEMENT

ಸಮಾರಂಭದಲ್ಲಿ ಅಧೀಕ್ಷಕ ಎಚ್.ಎಂ. ಕಿರಣ್, ವಾಣಿವಿಲಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಭಾಗಲಕ್ಷ್ಮಿ,   ಉಪನ್ಯಾಸಕರಾದ ಧರಣೇಶ್, ವಿಶ್ವನಾಥ್, ಮಾಲತಿ, ಶ್ರುತಿ, ರಶ್ಮಿ, ಜಯಶ್ರೀ, ಪಲ್ಲವಿ, ಪವಿತ್ರಾ, ಚಾಂದಿನಿ, ಸಂಜೀವ್‌ಕುಮಾರ್‌,  ಮಹೇಶ್ ಹಾಜರಿದ್ದರು. ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.