ADVERTISEMENT

ಶೀಘ್ರ ಖನಿಜ ಸಂಪತ್ತು ವಿಚಕ್ಷಣ ಪಡೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:22 IST
Last Updated 8 ಜುಲೈ 2017, 9:22 IST

ಹಾಸನ: ನಿಸರ್ಗದ ಖನಿಜ ಸಂಪತ್ತನ್ನು ಕಾಯ್ದುಕೊಳ್ಳಲು ಸರ್ಕಾರ ಹೊಸದಾಗಿ ಖನಿಜ ಸಂರಕ್ಷಣಾ ಪಡೆ ರಚಿಸಲು ನಿರ್ಧರಿಸಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಕಾಯಂ ಸೇವೆಗೆ 400 ಸಿಬ್ಬಂದಿ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಗಣಿ, ಕಲ್ಲು, ಮರಳು ನಿಕ್ಷೇಪಗಳು ಹಾಗೂ ಇಲಾಖೆಗಳಿಗೆ ಸಂಬಂಧಿಸಿದ ಇತರೆ ವಿಷಯಗಳ ಕುರಿತು  ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ಹೊಸದಾಗಿ ರಚಿಸಲು ಉದ್ದೇಶಿಸಿರುವ ಖನಿಜ ಸಂರಕ್ಷಣಾ ವಿಶೇಷ ಪಡೆಗೆ ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ರಾಜ್ಯ ಮಟ್ಟದಲ್ಲಿ ಐಪಿಎಸ್ ಅಧಿಕಾರಿಯನ್ನು ಮುಖ್ಯಸ್ಥರಾಗಿ ನೇಮಿಸಲಾಗುವುದು ಎಂದರು.

ADVERTISEMENT

ಈಗಾಗಲೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 400 ಪೊಲೀಸರನ್ನು ಕಾಯಂ ಆಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬಿಟ್ಟು ಕೊಡಲು ಸಮ್ಮತಿ ನೀಡಲಾಗಿದೆ. ಮುಂದಿನ ಒಂದೂವರೆ ತಿಂಗಳೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 19 ಖಾಸಗಿ ಗ್ರಾನೈಟ್ ಗಣಿಗಾರಿಕೆಗಳು ನಡೆಯುತ್ತಿವೆ. ಅಲ್ಲದೇ ಸರ್ಕಾರದ ವತಿಯಿಂದ 8 ಸ್ಥಳಗಳಲ್ಲಿ ಗಣಿಗಾರಿಕೆ ನಡೆದಿದೆ. ಗಣಿಗಾರಿಕೆಗೆ ಸಂಬಂದಪಟ್ಟ ಯಾವುದೇ ಕಡತಗಳು ಬಾಕಿ ಉಳಿದಿಲ್ಲ ಎಂದರು.

ಜಿಲ್ಲೆಯಲ್ಲಿ 40 ಮರಳು ನಿಕ್ಷೇಪಗಳ ಪೈಕಿ 4 ನಿಕ್ಷೇಪಗಳನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿರಿಸಲಾಗಿದೆ. ಉಳಿದ 36 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಅದರಲ್ಲಿ 5 ಬ್ಲಾಕ್‌ಗಳು ಏಕವ್ಯಕ್ತಿ ಬಿಡ್ ಸಲ್ಲಿಕೆ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆ ಅಪೂರ್ಣಗೊಂಡಿದೆ. ಉಳಿದ 31 ಬ್ಲಾಕ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಲ್ಲಿ ಹೆಚ್ಚಿನ ಬೆಲೆಗೆ ಬಿಡ್ ಸಲ್ಲಿಕೆಯಾದ್ದರಿಂದ ಮರಳು ಉಸ್ತುವಾರಿ ಸಮಿತಿಯಿಂದ 8 ಬ್ಲಾಕ್‌ಗಳ ಹರಾಜು ಪ್ರಕ್ರಿಯೆಗಳನ್ನು ತಿರಸ್ಕೃತಗೊಳಿಸಲಾಗಿದೆ.

ಉಳಿದ 23 ರಲ್ಲಿ 12.5 ಎಕರೆ ಒಳಗಿನ ವ್ಯಾಪ್ತಿಯಲ್ಲಿರುವ 10 ಮರಳು ಬ್ಲಾಕ್‌ಗಳಿಗೆ ಜಿಲ್ಲಾಧಿಕಾರಿ ಅವರು ತಮಗೆ ಪ್ರದತ್ತವಾದ ಅಧಿಕಾರ ಬಳಸಿ ಪರಿಸರ ಆಘಾತ ಅಂದಾಜು ದೃಢಿಕರಣ ಪತ್ರ ನೀಡಿದ್ದಾರೆ. 12.5 ಎಕರೆಗಿಂತ ಹೆಚ್ಚಿನ ಜಾಗದಲ್ಲಿರುವ 13 ಮರಳು ನಿಕ್ಷೇಪಗಳಿಗೆ ರಾಜ್ಯ ಪರಿಸರ ಆಘಾತ ಅಂದಾಜು ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು ಎಂದರು.

ಮರಳು ನಿಕ್ಷೇಪಗಳ ವ್ಯಾಪ್ತಿ ವಿಸ್ತಾರವಾದುದರಿಂದ ಅದರ ನಿರ್ವಹಣೆ ಮತ್ತು ಉಸ್ತುವಾರಿ ಬಹಳ ಕಷ್ಟ. ಆದರೂ ಸಮರ್ಥವಾಗಿ ನಿಭಾಯಿಸಲು ಎಲ್ಲಾ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.