ADVERTISEMENT

ಶೀಘ್ರ ರೈಲ್ವೆ ಮೇಲ್ಸೆತುವೆ ಕಾಮಗಾರಿ ಆರಂಭಿಸಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 7:04 IST
Last Updated 16 ಸೆಪ್ಟೆಂಬರ್ 2017, 7:04 IST
ಅಗಿಲೆ ಯೋಗೀಶ್‌
ಅಗಿಲೆ ಯೋಗೀಶ್‌   

ಹಾಸನ: ‘ಹೊಸ ಬಸ್‌ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಈ ಕುರಿತು ಮಾತನಾಡುವ ನೈತಿಕತೆ ಶಾಸಕ ಎಚ್‌.ಡಿ.ರೇವಣ್ಣರಿಗೆ ಇಲ್ಲ’ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಗಮನ ಸೆಳೆದ ಕಾರಣ ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಯ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ, ಇತ್ತೀಚೆಗೆ ರೇವಣ್ಣ ಅವರು ಎನ್‌.ಆರ್‌.ವೃತ್ತದಿಂದ–ಡೇರಿ ವೃತ್ತದವರೆಗೆ ಮೇಲ್ಸೇತುವೆ ನಿರ್ಮಿಸಲು ಸಂಸದ ಎಚ್‌.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಹೇಳಿಕೆ ನೀಡುತ್ತಾ ಪುಕ್ಕಟೆ ಪ್ರಚಾರ ಪಡೆಯುತಿದ್ದಾರೆ’ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಸಚಿವರಾಗಿದ್ದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಒಡೆದು ಬಡಾವಣೆ ನಿರ್ಮಿಸಿದರು. ಕೆರೆ ಮುಚ್ಚದಂತೆ ಪ್ರಗತಿಪರ ಚಿಂತಕರು, ರೈತರು, ಪರಿಸರ ಪ್ರೇಮಿಗಳು ಸಲಹೆ ನೀಡಿದರೂ ಕೇಳಲಿಲ್ಲ. ನೂತನ ಬಸ್‌ ನಿಲ್ದಾಣದ ನಂತರ ಇಂದಿಗೂ ಎನ್‌.ಆರ್‌.ವೃತ್ತದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಸಂಬಂಧ ಜೆಡಿಎಸ್ ನಾಯಕರು ಕೇಂದ್ರದ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸದೆ, ಈಗ ಬಿಜೆಪಿ ಯೋಜನೆಗಳ ಕೀರ್ತಿ ಪಡೆಯಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕೊಡುಗೆ ಶೂನ್ಯ. ಸಚಿವ ಎ.ಮಂಜು ಹೊಸ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ ಜಾರಿಗೆ ತಂದಂತಹ ಯೋಜನೆಗಳನ್ನು ನಮ್ಮವೆಂದು ಹೇಳಿಕೊಳ್ಳುತ್ತಾ ಪ್ರಚಾರ ಪಡೆಯಲು ಮುಂದಾಗಿದ್ದಾರೆ.

ಆದಷ್ಟು ಬೇಗ ನಗರದ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸುಧೀರ್‌, ರಾಘವೇಂದ್ರ, ಸುರೇಶ್‌, ಪುನೀತ್‌ ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.