ADVERTISEMENT

ಸಂಪುಟದಿಂದ ಕಳಂಕಿತ ಸಚಿವರ ಕೈ ಬಿಡಿ

ಫೆ. 20ರಂದು ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ; ಮುಖ್ಯಮಂತ್ರಿಯಿಂದ ಅಭಿವೃದ್ಧಿ ಕಡೆಗಣನೆ–ಟೀಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 8:44 IST
Last Updated 18 ಫೆಬ್ರುವರಿ 2017, 8:44 IST
ಹಾಸನ: ರಾಜ್ಯ ಸಚಿವ ಸಂಪುಟದಿಂದ ಕಳಂಕಿತ ಸಚಿವರನ್ನು ಕೈಬಿಡಬೇಕು ಮತ್ತು ಭ್ರಷ್ಟಾಚಾರದ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿ ಫೆ.20ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌. ವಿಜಯಶಂಕರ್‌ ತಿಳಿಸಿದರು. 
 
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಕಳೆಯುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಕಂಕಣ ತೊಟ್ಟಿದ್ದರೆ. ಆದರೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಕ್ಷದಲ್ಲಿ ಮಹಿಳಾ ಮೋರ್ಚಾದಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. 
 
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮುದಾಯಗಳ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ.  ಶಾಸಕ ಗೋವಿಂದರಾಜು ಅವರ ಬಳಿ ಸಿಕ್ಕ ಡೈರಿಯಲ್ಲಿ ಪಕ್ಷದ ವರಿಷ್ಠರಿಗೆ ₹ 1ಸಾವಿರ ಕೋಟಿ  ನೀಡಿರುವ ಸಂಬಂಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾಡಿರುವ ಆರೋಪದ ಬಗ್ಗೆ ನಿಖರ ಮಾಹಿತಿಗಳಿವೆ. ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
 
ಜಿಲ್ಲೆಯಲ್ಲಿ ಬರ ಆವರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಜಿಲ್ಲಾಡಳಿತವಾಗಲಿ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ವಾಸ್ತವ ಮಾಹಿತಿ ಕಲೆ ಹಾಕುತ್ತಿಲ್ಲ. ಜನ ಸಾಮಾನ್ಯರ ಬಳಿ ತೆರಳಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸುತ್ತಿಲ್ಲ. ಅಗತ್ಯವಿರುವ ಕಡೆ ಗೋಶಾಲೆ ತೆರೆಯುತ್ತಿಲ್ಲ ಹಾಗೂ ಕುಡಿಯುವ ನೀರು ಪೂರೈಸುತ್ತಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಮುಂಗಾರು, ಹಿಂಗಾರು ಬೆಳೆಹಾನಿಗೆ ಪರಿಹಾರ ನೀಡಿಲ್ಲ. ಜನರು ದಂಗೆ ಹೇಳುವ ಮೊದಲು ಜಿಲ್ಲಾಡಳಿತ ಬರ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪಕ್ಷದ ಮುಖಂಡ ಶಿವರಾಂ ಮಾತನಾಡಿ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಸಾಯುತ್ತಿವೆ. ಇಂತಹ ಸ್ಥಿತಿಯಲ್ಲಿ ಬರನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳದ ಸರ್ಕಾರ ಬೆಂಗಳೂರಿನಲ್ಲಿ ಬಹುಕೋಟಿ ವೆಚ್ಚದಲ್ಲಿ ಸ್ಟೀಲ್‌ ಬ್ರಿಡ್ಜ್‌ ನಿರ್ಮಿಸಲು ಮುಂದಾಗಿರುವುದು ವಿಪರ್ಯಾಸ ಎಂದರು. ಮುಖಂಡ ಸೂರ್ಯನಾರಾಯಣ್‌, ಜಿಲ್ಲಾ ಘಟದ ಅಧ್ಯಕ್ಷ ಯೋಗಾರಮೇಶ್‌, ಬಸವರಾಜ್‌ ಇದ್ದರು. 
 
* ಬರ ಪರಿಹಾರ ಕಾಮಗಾರಿಗೆ ಸರ್ಕಾರ ಪ್ರತಿ ತಾಲ್ಲೂಕಿಗೆ ₹ 35 ಲಕ್ಷ ಹಣ ಬಿಡುಗಡೆ ಮಾಡಿದೆ. ಬರ ನಿರ್ವಹಣೆ  ಬಗ್ಗೆ ಜಿಲ್ಲಾಧಿಕಾರಿ ವಿ.ಚೈತ್ರಾ ಬೇಜವಾಬ್ದಾರಿ ಉತ್ತರ ನೀಡುತ್ತಾರೆ
-ವಿಜಯಶಂಕರ್‌, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.