ADVERTISEMENT

ಸಚಿವ ಎ.ಮಂಜು ನಾಮಪತ್ರ ಸಲ್ಲಿಕೆ

ಪತ್ನಿ ತಾರಾ ಜೊತೆಗೂಡಿ ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ಪೂಜೆ; ಬೆಂಬಲಿಗರಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 7:19 IST
Last Updated 20 ಏಪ್ರಿಲ್ 2018, 7:19 IST

ಅರಕಲಗೂಡು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಗುರುವಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

ಸ್ವಗ್ರಾಮ ಹನ್ಯಾಳು ಗ್ರಾಮದ ಮನೆಯಲ್ಲಿ ಗೋ ಪೂಜೆ ಸಲ್ಲಿಸಿದ ಬಳಿಕ ಗ್ರಾಮದೇವತೆ ಏರಿ ಮೇಗಲ ಹನ್ಯಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ರುದ್ರಪಟ್ಟಣದ ವೀರಾಂಜನೇಯ, ಗಂಗೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಅರಕಲಗೂಡಿಗೆ ಬಂದ ಅವರು ಕೆಇಬಿ ರಸ್ತೆ ಶಕ್ತಿ ಗಣಪತಿ, ಗ್ರಾಮದೇವತೆ ದೊಡ್ಡಮ್ಮ, ಕೊತ್ತಲು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪತ್ನಿ ತಾರಾ ಅವರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ದ್ವಿಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಷೇತ್ರದಲ್ಲಿ ಎರಡೂವರೆ ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಹುಮುಖ್ಯವಾಗಿ ಪಶು ಆಹಾರ ಘಟಕ ಸ್ಥಾಪನೆ, ಗಂಗನಾಳು ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಹಾಳು ಬಿದ್ದಿದ್ದ ರಸ್ತೆಗಳನ್ನು ದುರಸ್ತಿ ಪಡಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಭಿವೃದ್ಧಿ ಕೆಲಸಗಳು ಚುನಾವಣೆಯಲ್ಲಿ ಕೈಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹಾಗೂ ಬೆಂಬಲಿಗರು ಹಾಜರಿದ್ದರು. ನಾಮ ಪತ್ರ ಸಲ್ಲಿಕೆ ವೇಳೆ ತಾಲ್ಲೂಕು ಕಚೇರಿ ಸುತ್ತ ಅರೆ ಸೇನಾ ಪಡೆ ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.