ADVERTISEMENT

ಸುಂದರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

ಮಕ್ಕಳ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದವರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:32 IST
Last Updated 9 ಮಾರ್ಚ್ 2017, 9:32 IST
ಹಾಸನ: ಮಕ್ಕಳ ಪ್ರತಿಭೆ ಪೋಷಿಸುವುದು ಗುರು, ಹಿರಿಯರ ಕರ್ತವ್ಯ. ಆ ಮೂಲಕ ಸ್ವಸ್ಥ ಮತ್ತು ಸುಂದರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ  ಶಂಭುನಾಥ ಸ್ವಾಮೀಜಿ ಹೇಳಿದರು.
 
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ  ನಡೆದ ಅಖಿಲ ಕರ್ನಾಟಕ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದವರಿಗೆ ಅಭಿನಂದನೆ ಸಲ್ಲಿಸಲು  ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
 
ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ನಿಜವಾದ ದೇವರ ಸೇವೆ ಎಂಬ ಧ್ಯೇಯ ಹೊಂದಿದ್ದ  ಬಾಲಗಂಗಾಧರನಾಥ ಸ್ವಾಮೀಜಿ ಅವರು ನಾಡಿದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಜೊತೆ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಕಾರ್ಯಗಳನ್ನು ಮಾಡಿಕೊಂಡು ಬಂದರು. ಆ ಪರಂಪರೆಯನ್ನು ಶ್ರೀಮಠವು ಮುಂದುವರಿಸುತ್ತಿದೆ ಎಂದು ತಿಳಿಸಿದರು.
 
ಸಮ್ಮೇಳನದ ಸಹ ಅಧ್ಯಕ್ಷೆಯಾಗಿದ್ದ ಬೆಳ್ತಂಗಡಿಯ ಅನನ್ಯಾ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಆದರೆ , ಶಿಕ್ಷಕರ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಆದ್ದರಿಂದ ಎಲ್ಲಾ ಭಾಗ್ಯಗಳನ್ನೂ ನೀಡುತ್ತಿರುವ ಸರ್ಕಾರ ಶಿಕ್ಷಕರ ಭಾಗ್ಯವನ್ನೂ ನೀಡಲಿ ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿದರು. ಉಪವಿಭಾಗಾಧಿಕಾರಿ  ಎಚ್.ಎಲ್. ನಾಗರಾಜ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು.  
 
ಸಮ್ಮೇಳನದ ಯಶಸ್ಸಿಗೆ ದುಡಿದವರನ್ನು  ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಡಾ.ಎಚ್.ಎಸ್.ಅನಿಲ್ ಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಾಂತರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಸಿ.ಜಯದೇವಯ್ಯ,  ರವಿ ನಾಕಲಗೂಡು,   ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್. ಅಶೋಕ್, ಉಪಾಧ್ಯಕ್ಷ ಪಟೇಲ್ ಮಂಜುನಾಥ್, ಸಮ್ಮೇಳನದ ಸಹ ಅಧ್ಯಕ್ಷ ವಿವೇಕ್ ಹಾಜರಿದ್ದರು. ಲಕ್ಷ್ಮೀನಾರಾಯಣ   ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.