ADVERTISEMENT

ಸೂಕ್ತ ಪರಿಹಾರ ನಿಗದಿ: ಸಂತ್ರಸ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 9:06 IST
Last Updated 18 ಜೂನ್ 2017, 9:06 IST

ಸಕಲೇಶಪುರ: ತಾಲ್ಲೂಕಿನಲ್ಲಿ ಎತ್ತಿನಹೊಳೆ ತಿರುವು ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ಹಿಡುವಳಿದಾರರಿಗೆ ಪರಿಹಾರ ನಿಗದಿಗೊಳಿಸಿರುವ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಬಹುತೇಕ ಸಂತ್ರಸ್ತರಿಂದ ವಿರೋಧ ವ್ಯಕ್ತವಾಗಿದೆ. 2016–17ರಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾದ,ಆಯಾಯ ಗ್ರಾಮಗಳಲ್ಲಿ ಮಾರಾಟವಾದ ಎಲ್ಲ ತರದ ಭೂಮಿ (ಖುಷ್ಕಿ, ತರಿ, ಬಾಗಾಯ್ತು, ಕಾಫಿ) ಬೆಲೆ ಆಧರಿಸಿ ಜಿಲ್ಲಾಧಿಕಾರಿ ಭೂ ಪರಿಹಾರ ನಿಗದಿಗೊಳಿಸಿದ್ದಾರೆ.

ಉದಾಹರಣೆಗೆ ತಾಲ್ಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನಾಪುರ ಗ್ರಾಮದ ಖುಷ್ಕಿ ಜಮೀನಿನ ಬೆಲೆ ₹ 39,20,002, ತರಿ ಜಮೀನಿನ ಬೆಲೆ ₹  22,34,002, ಬಾಗಾಯ್ತು ₹ 6,15,000 ಮತ್ತು ಕಾಫಿ ಜಮೀನಿನ ಬೆಲೆ ₹ 36,31,578  ನಿಗದಿಗೊಳಿಸಿರುತ್ತಾರೆ.    

ಕಾಫಿ ಜಮೀನಿಗಿಂತಲೂ ಖುಷ್ಕಿ ಜಮೀನಿಗೆ ನಿಗದಿಪಡಿಸಿರುವ ದರ ಹೆಚ್ಚಿದೆ. ತರಿ ಮತ್ತು ಬಾಗಾಯ್ತಿಗಿಂತ ಖುಷ್ಕಿ  ಭೂಮಿಗೆ ಬೆಲೆ ಹೆಚ್ಚು ಇದೆ. ಖುಷ್ಕಿ ಜಮೀನಿನಲ್ಲಿ ರೈತರು ಬಂಡವಾಳ ಹಾಕಿ ಕಾಫಿ, ಏಲಕ್ಕಿ, ಕಾಳುಮೆಣಸು, ಅಡಿಕೆ ಬೆಳೆ ಬೆಳೆಯುತ್ತಾರೆ.

ADVERTISEMENT

ಆದರೆ ಕಾಫಿ ಜಮೀನಿಗೆ ಖುಷ್ಕಿ ಜಮೀನಿಗಿಂತಲೂ ಕಡಿಮೆ ಬೆಲೆ ನಿಗದಿ ಮಾಡಿದ್ದಾರೆ. ಇದು ಅವೈಜ್ಞಾನಿಕ ಎಂದು ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ ಪ್ರತಿಕ್ರಿಯಿಸುತ್ತಾರೆ.
ಖುಷ್ಕಿಗೆ ₹ 39,20,002 ನಿಗದಿ ಆಗಿರುವಾಗಗಿ ತರಿ, ಬಾಗಾಯ್ತು ಮತ್ತು ಕಾಫಿ ಜಮೀನಿಗೆ ಇನ್ನೂ ಹೆಚ್ಚಿನ ದರ ನಿಗದಿಯಾಗಬೇಕು. ಇದೇ ಮಾನದಂಡ ಅನುಸರಿಸಿದರೆ ಕಾಫಿ ಜಮೀನಿಗೆ ಎಕರೆಗೆ ₹ 1ಕೋಟಿ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಕಾಫಿಯನ್ನು ಮಲೆನಾಡಿನ ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ.

ಲಕ್ಷಾಂತರ ಮಂದಿಗೆ ಬದುಕು ನೀಡುತ್ತಿದ್ದು, ಕುಟುಂಬಗಳ ಬದುಕಿಗೆ ಕಾಫಿ ತೋಟಗಳೇ ಆದಾರ. ಬದುಕಿಗೆ ಆಧಾರವಾಗಿರುವ ಜಮೀನಿಗೆ ಸೂಕ್ತ, ವೈಜ್ಞಾನಿಕ ದರ ನಿಗದಿಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಬೇಕಾದಿತು ಎಂದು ಸಂತ್ರಸ್ತರಾದ ಕಿರಣ್‌ ಕುಶಾಲಪ್ಪ, ಸುಂದರರಾಜ್‌, ಮೃತ್ಯುಂಜಯ ಒತ್ತಾಯಿಸುತ್ತಾರೆ.
ವೈಜ್ಞಾನಿಕ ರೀತಿ ದರ ನಿಗದಿಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.