ADVERTISEMENT

ಹೆಚ್ಚುವರಿ ಮತಗಟ್ಟೆ; ಪೂರಕ ಮಾಹಿತಿ ನೀಡಿ

ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 9:50 IST
Last Updated 20 ಮಾರ್ಚ್ 2018, 9:50 IST

ಹಾಸನ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಕಡೆ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ ಪೂರಕ ಮಾಹಿತಿಯನ್ನು ಶೀಘ್ರ ನೀಡಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮ ತಹಶೀಲ್ದಾರುಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಅಧಿಕಾರಿಗಳು ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎನ್.ಇ.ಆರ್.ಪಿ ತಂತ್ರಾಂಶದಲ್ಲಿ ಮತಗಟ್ಟೆಗಳ ಸ್ಥಿತಿ-ಗತಿಗಳು ಹಾಗೂ ನಕ್ಷೆ ಅಳವಡಿಸುವ ಕುರಿತು ಪರಿಶೀಲಿಸಿ ಎಲ್ಲಾ ಮತಗಟ್ಟೆಗಳಲ್ಲಿ ರ್‍ಯಾಂಪ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇರುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಮತಗಟ್ಟೆವಾರು ಕುಲಂಕಶವಾಗಿ ಪರಿಶೀಲನೆ ನಡೆಸಿ ಸುರಕ್ಷತಾ ವ್ಯವಸ್ಥೆ, ಮೂಲಸೌಕರ್ಯಗಳ ಲಭ್ಯತೆ ಖಾತರಿಪಡಿಸಿಕೊಳ್ಳಬೇಕು. ಮತಗಟ್ಟೆಗಳ ದುರಸ್ತಿ, ದುರ್ಬಲ ಮತ್ತು ಸೂಕ್ಷ್ಮ ಮತಗಟ್ಟೆ ಅಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಚುನಾವಣಾ ನಿರ್ವಾಹಣಾ ಯೋಜನೆ ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರ ಹಾಗೂ ಯೋಜನೆ ವಿಷಯ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಚುನಾವಣೆಗೆ ಮತಗಟ್ಟೆ ಸಿಬ್ಬಂದಿ ನೇಮಕಾತಿಗಳ ಸಂಬಂಧ ಜಿಲ್ಲೆಯ ಎಲ್ಲ ಅಧಿಕಾರಿ, ನೌಕರರ ಸೇವಾ ವಿವರಗಳ ದತ್ತಾಂಶ ಸಂಗ್ರಹಣೆಗಾಗಿ ಎನ್.ಐ.ಸಿ ತಂತ್ರಾಂಶದಲ್ಲಿ ಡೇಟಾ ಎಂಟ್ರಿ ಮಾಡಲು ಅವಕಾಶವಿದ್ದರೂ ದತ್ತಾಂಶ ಸಂಗ್ರಹಣೆಯಲ್ಲಿ ತೀರಾ ಕುಂಠಿತವಾಗಿದೆ.ಮಾರ್ಚ್‌ 21 ರೊಳಗಾಗಿ
ಎಚ್.ಆರ್.ಎಂ.ಎಸ್. ಡೇಟಾ
ಎಂಟ್ರಿ ಮಾಡಿಸಬಹುದು ಹಾಗೂ ತಾಲ್ಲೂಕು ಕಚೇರಿಯಲ್ಲಿ ತಮ್ಮ ಸೇವಾ ವಿವರಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಎಚ್.ಎಲ್ ನಾಗರಾಜು, ಆಲೂರು-ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪರೀಕ್ಷಾರ್ಥ ಕೆ.ಎ.ಎಸ್ ಅಧಿಕಾರಿಗಳಾದ ಕಲ್ಪಶ್ರೀ, ಗಿರೀಶ್ ನಂದನ್, ವಿವಿಧ ತಾಲ್ಲೂಕು ತಹಶೀಲ್ದಾರ್‌, ಚುನಾವಣೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.