ADVERTISEMENT

ಹೆಚ್ಚುವರಿ ಮೇವು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಮೇವಿನ ಲಾರಿಗಳು ಬಂದಾಕ್ಷಣ ಪ್ರತಿಭಟನೆ ಕೈಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 9:35 IST
Last Updated 25 ಮಾರ್ಚ್ 2017, 9:35 IST

ಹಳೇಬೀಡು: ಪಟ್ಟಣದಲ್ಲಿ ಆರಂಭಿಸಿ ರುವ ಮೇವು ಬ್ಯಾಂಕ್‌ಗೆ ಪ್ರತಿದಿನ 15 ಟನ್‌ ಮೇವು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಗೋಣಿಸೋಮನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಶುಕ್ರವಾರ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹಳೇಬೀಡು ಹೋಬಳಿಯಲ್ಲಿ 31,000 ಜಾನುವಾರುಗಳಿವೆ. ಪ್ರತಿ ಗ್ರಾಮದಲ್ಲಿಯೂ ಮೇವು ನೀರಿನ ಕೊರತೆ ಕಾಡುತ್ತಿದೆ. ಆದರೆ, ಈಗ 700 ಜಾನುವಾರುಗಳಿಗೆ ಆಗುವಷ್ಟು ಮೇವು ಮಾತ್ರ ಪ್ರತಿದಿನ ಹಳೇಬೀಡು ಮೇವು ಬ್ಯಾಂಕ್‌ನಲ್ಲಿ ಮಾರಾಟವಾಗುತ್ತಿದೆ. ಮೇವು ಪೂರೈಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಾನುವಾರುಗಳಿಲ್ಲದೆ ಕೃಷಿ ಕಾಯಕ ಪೂರ್ಣವಾಗುವುದಿಲ್ಲ. ಜಾನುವಾರು ಕಳೆದುಕೊಂಡರೆ ಭೂಮಿಯ ಫಲವತ್ತತೆ ಕಾಪಾಡಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಮರ್ಪಕ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೋಬಳಿ ರೈತಸಂಘದ ಗೌರವ ಅಧ್ಯಕ್ಷ ಗಡಿಮಲ್ಲಿಕಾರ್ಜುನ ತಿಳಿಸಿದರು.

ಹೋಬಳಿ ಗಡಿ ಭಾಗದ ಗ್ರಾಮಸ್ಥರು ಹೋಬಳಿ ಕೇಂದ್ರಕ್ಕೆ ಬಂದು ಮೇವು ಪಡೆಯಬೇಕು. ಇದರಿಂದ ಸಾಗಣೆ ವೆಚ್ಚವೇ ದುಬಾರಿಯಾಗುತ್ತದೆ. ಗಂಗೂರು, ದೊಡ್ಡಕೋಡಿಹಳ್ಳಿ, ಗೋಣಿ ಸೋಮನಹಳ್ಳಿ, ರಾಜನಶಿರಿಯೂರು ಗ್ರಾ.ಪಂ ಕೇಂದ್ರಗಳಲ್ಲಿ ಒಂದೊಂದು ಮೇವು ಬ್ಯಾಂಕ್‌ ಆರಂಭಿಸಿದರೆ ಅನು ಕೂಲವಾಗುತ್ತದೆ ಎಂದು ಆಗ್ರಹಿಸಿದರು.

ದೊಡ್ಡಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥಗರಿಗೆ ಅರಸೀಕೆರೆ ತಾಲ್ಲೂಕಿನ ಜಾವಗಲ್‌ ಹೋಬಳಿ ಕೇಂದ್ರ ಹತ್ತಿರದಲ್ಲಿದೆ. ಆದರೆ, ಜಾವಗಲ್‌ನಲ್ಲಿ ಹಳೇಬೀಡು ಹೋಬಳಿಯವರಿಗೆ ಮೇವು ಕೊಡುವುದಿಲ್ಲ. 10 ಕಿ.ಮೀ ದೂರದ ಹಳೇಬೀಡಿನಿಂದ ಮೇವು ತರಲು ಸಮರ್ಪ ಸಾರಿಗೆ ಸೌಲಭ್ಯವೂ ಇಲ್ಲ. ಹಳ್ಳಿಯ ಪ್ರತಿ ರೈತರಿಗೂ ಮೇವು ದೊರಕುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಮೇವು ನೀಡಿ, ಜಾನುವಾರು ಉಳಿಸಿ’, ‘ಬೇಕೇ ಬೇಕು ಮೇವು ಬೇಕು’ ಎಂದು ಘೋಷಣೆ ಕೂಗುತ್ತ ರೈತರು ಕಚೇರಿ ಬಾಗಿಲು ತೆಗೆಯುವ ಮೊದಲೆ ಪ್ರತಿಭಟನೆ ಆರಂಭಿಸಿದ್ದರು.

11 ಗಂಟೆ ನಂತರ ಜೋಳದ ಸೆಬ್ಬೆ ತುಂಬಿದ ಮೂರು ಲಾರಿಗಳು ಮೇವು ಬ್ಯಾಂಕ್‌ಗೆ ಬಂದವು. ಪ್ರತಿದಿನ ಒಂದು ಲಾರಿಯಲ್ಲಿ ಮಾತ್ರ ಮೇವು ಬರುತ್ತಿತ್ತು. ಪ್ರತಿಭಟನೆ ನಡೆಸುತ್ತಿದ್ದ ರೈತರು ಮೂರು ಲಾರಿ ನೋಡಿದಾಕ್ಷಣ ತರಾತುರಿಯ ಲ್ಲಿಯೇ ಮೇವು ಪಡೆಯಲು ತೆರಳಿದರು. ಗೋಣಿಸೋಮನಹಳ್ಳಿ ನೇಮ್‌ ರಾಜ್‌, ಉಮೇಶ್‌, ಪ್ರಭಾಕರ, ಮಹೇಶ್‌, ಕರಿಕಟ್ಟೆಹಳ್ಳಿ ನಾಗರಾಜ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.