ADVERTISEMENT

ಹೆಣ್ಣಿನ ಶೋಷಣೆ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:22 IST
Last Updated 24 ಮಾರ್ಚ್ 2017, 8:22 IST

ಹಾಸನ: ಜಾತಿ, ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಅಸಮಾನತೆಯಿಂದ ನೋಡುವುದು  ಇಂದಿಗೂ ಜೀವಂತ ವಿರುವ ಹಿನ್ನಲೆಯಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಲೇಖಕಿ ಪಿ.ಭಾರತಿದೇವಿ ಕಿವಿಮಾತು ಹೇಳಿದರು.

ಪ್ರಕೃತಿ ಮಹಿಳಾ ಸಂಘ ಹಾಗೂ ಸಾವಿತ್ರಿ ಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದಿಂದ ಮಾನವ ಬಂಧುತ್ವ ವೇದಿಕೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ದೈಹಿಕವಾಗಿ ಗಂಡು ಹೆಣ್ಣಿನಲ್ಲಿ ವ್ಯತ್ಯಾಸ ಬಿಟ್ಟರೆ ಬೇರೇನು ಅಂತರ ಇಲ್ಲ. ಆದರೆ, ಹೆಣ್ಣು ಕೇವಲ ಕುಟುಂಬಕ್ಕೆ ಸೀಮಿತಳಾಗಿದ್ದಾಳೆ. ರಿಯಾಲಿಟಿ ಶೋಗಳಲ್ಲಿ ಹೆಣ್ಣನ್ನು ವಿಕೃತವಾಗಿ ಬಿಂಬಿಸಲಾಗುತ್ತಿದೆ. ಸಮಾಜದಲ್ಲಿ ದಲಿತರ ಮೇಲೆ ಯಾವ ಶೋಷಣೆ ಇರುವಂತೆ ಹೆಣ್ಣಿನ ವಿರುದ್ಧವೂ ಶೋಷಣೆ ಮುಂದುವರಿದಿದೆ. ಇವುಗಳ ವಿರುದ್ಧ ಹೆಣ್ಣು ಧ್ವನಿ ಎತ್ತಬೇಕು ಎಂದು ತಿಳಿಸಿದರು.

ಲೇಖಕಿ ಕೆ.ಟಿ.ಜಯಶ್ರಿ ಮಾತನಾಡಿ, ತಳ ಸಮುದಾಯ ಮಹಿಳೆಯರು ಜೀವನ ಶೈಲಿ ಮತ್ತು ಪ್ರಗತಿಗೆ  ಚಿಂತಿಸಬೇಕು. ಉತ್ತಮ ಗುರಿಯೊಂದಿಗೆ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಮಹಿಳೆ ಮೇಲೆ ದೌರ್ಜನ್ಯ, ವೇತನ ತಾರತಮ್ಯ ನಡೆಯುತ್ತಿವೆ.

ಪುರುಷನಿಗೆ ಸಮನಾಗಿ  ಸಮಾನತೆ ಸಿಗುತ್ತಿಲ್ಲ. ಮಹಿಳೆಯರು ಪರಾವಲಂಬಿ ಗಳಾಗದೆ ಸ್ವ ಉದ್ಯೋಗದಿಂದ ಆರ್ಥಿಕ ಪ್ರಗತಿ ಕಂಡುಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.

ಜಾನಪದ ಪರಿಷತ್ತಿನ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಜಿ.ಓ.ಮಹಾಂತಪ್ಪ, ಅನ್ನಪೂರ್ಣಮ್ಮ. ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಕೆ.ಪ್ರಕಾಶ್, ಪ್ರಕೃತಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ಬೋರೇಗೌಡ, ಸಾವಿತ್ರಿಬಾಯಿ ಫುಲೆ, ಸಾಂಸ್ಕೃತಿಕ ಮಹಿಳಾ ಸಂಘದ ಅಧ್ಯಕ್ಷೆ ಭವ್ಯ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.