ADVERTISEMENT

‘ಕೃಷಿಭಾಗ್ಯ’ಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 10:56 IST
Last Updated 6 ಮಾರ್ಚ್ 2015, 10:56 IST

ಅರಸೀಕೆರೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕೃಷಿಭಾಗ್ಯ’ದಡಿ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳು ಭರದಿಂದ ಸಾಗಿವೆ. ಹಲವು ಫಲಾನುಭವಿಗಳು ಈಗಾಗಲೇ ಯೋಜನೆಯ ಸದುಪಯೋಗ ಕೂಡ ಮಾಡಿಕೊಂಡಿದ್ದಾರೆ. ಈ ಮೂಲಕ ಕೃಷಿ ಇಲಾಖೆ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಸ್ಪಂದನೆ ಆರಂಭಿಸಿದೆ.

ಯೋಜನೆಯ ಅನುಷ್ಠಾನಕ್ಕಾಗಿ ತಾಲ್ಲೂಕಿನ ಕೃಷಿ ಇಲಾಖೆಗೆ ಸರ್ಕಾರ ₨ 1 ಕೋಟಿ ಬಿಡುಗಡೆ ಮಾಡಿದೆ. ಅಲ್ಲದೆ ಆಯ್ಕೆಯಾದ ಫಲಾನುಭವಿಗೆ ಕಾಮಗಾರಿ ಮಾಡಲು ಕನಿಷ್ಠ ₨ 1.20 ಲಕ್ಷದಿಂದ ₨ 1.88 ಲಕ್ಷದವರೆವಿಗೂ ನೆರವು ನೀಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ಶೇಕಡ 80 ಭಾಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಡದ ವರ್ಗದವರಿಗೆ ಶೇಕಡ 90ರಷ್ಟು ಕಾಮಗಾರಿಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಉಳಿದ ವೆಚ್ಚವನ್ನು ಫಲಾನುಭವಿ ರೈತ ಭರಿಸಬೇಕಾಗುತ್ತದೆ. ‘ಕೃಷಿಭಾಗ್ಯ’ ಯೋಜನೆಯಡಿ ಲಾಟರಿ ಮೂಲಕ ಆಯ್ಕೆಗೊಂಡ ರೈತ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ಕೃಷಿಹೊಂಡ, ಪಾಲಿಥಿನ್‌ ಹೌಸ್‌ ಮುಂತಾದ ಕಾಮಗಾರಿ ಆರಂಭಿಸಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ, ಹಾಸನ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಈಗಾಗಲೇ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮಳೆಯಾಶ್ರಿತ ಬೆಳೆಗಳು ಬಾಡಿ ಹೋಗುವ ಸಂದಿಗ್ಧ ಪರಿಸ್ಥಿತಿ ಎದುರಿಸುವ ಸಂದರ್ಭದಲ್ಲಿ ಈ ಯೋಜನೆ ನೆರವಿಗೆ ಬರಲಿದೆ. ಬೆಳೆ ರಕ್ಷಣೆ ಮಾಡಿಕೊಳ್ಳುವ ಜತೆಗೆ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

ಮಣ್ಣಿನ ಗುಣಕ್ಕೆ ಹೊಂದುವ ಬೆಳೆ ಪ್ರಾತ್ಯಕ್ಷಿಕೆ ನಡೆಸಲು ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₨ 5 ಸಾವಿರ ಪ್ರೋತ್ಸಾಹ ಧನ ಒದಗಿಸುತ್ತದೆ. ತಾಲ್ಲೂಕಿನ ಕಸಬಾ ನಾಗತಿಹಳ್ಳಿ, ಬಂಡೀಹಳ್ಳಿ, ಹೆಬ್ಬಾರನಹಳ್ಳಿ, ಅಣ್ಣೇನಹಳ್ಳಿ, ಅಗ್ಗುಂದ ಚಿಕ್ಕೂರು, ಬಾಣಾವರ ಹೋಬಳಿಯ ಹಿರಿಯೂರು, ಶಾಂತನಹಳ್ಳಿ, ಹರಿಹರಪುರ, ಚೆಲುವನಹಳ್ಳಿ, ಭೈರಗೊಂಡನಹಳ್ಳಿ ಸೇರಿದಂತೆ ಆನೇಕ ಗ್ರಾಮಗಳಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಈಗಾಗಲೇ ಆರಂಭಿಸಿರುವ ಕಾಮಗಾರಿಗಳು ಶೇಕಡ 80ರಷ್ಟು ಪೂರ್ಣಗೊಂಡಿವೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಕಾಮಗಾರಿ?: ಮಳೆನೀರು ಹರಿದು ಹೋಗದಂತೆ ಜಮೀನಿನಲ್ಲಿ ಒಡ್ಡುಗಳ ನಿರ್ಮಾಣ, ಈ ನೀರು ಹೊರಗೆ ಹೋಗದಂತೆ ಒಂದೆಡೆ ಸಂಗ್ರಹಿಸಲು ಕೃಷಿಹೊಂಡ ನಿರ್ಮಾಣ. ಇದು ಮೊದಲ ಹಂತದ ಕಾಮಗಾರಿ. ನಂತರದ ಹಂತದಲ್ಲಿ ಡಿಸೇಲ್‌ ಎಂಜಿನ್‌ ಅಥವಾ ಸೋಲಾರ್‌ ವ್ಯವಸ್ಥೆ ಮೂಲಕ ಪಂಪ್‌ ಮಾಡಿ ನೀರೆತ್ತಿ, ಸ್ಪಿಂಕ್ಲರ್‌ ಅತವಾ ಹನಿ ನೀರಾವರಿ ಮೂಲಕ ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳಲು ಆಗತ್ಯ ಪರಿಕರಗಳನ್ನು ಒದಗಿಸಲಾಗುವುದು ಎಂದರು.

ಈಗಾಗಲೇ ಎರಡು ಹಂತಗಳಲ್ಲಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ 400 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಎಸ್‌ಸಿ/ಎಸ್‌ಟಿ ಜನಾಂಗದ 120 ರೈತರು ಮತ್ತು ಸಾಮಾನ್ಯ ವರ್ಗದ 280 ಮಂದಿ ಫಲಾನುಭವಿಗಳು ಆಯ್ಕೆಯ ಅಗಿದ್ದಾರೆ. ಆದರೂ  ಕೇವಲ 50 ಮಂದಿ ಫಲಾನುಭವಿಗಳು ಕೃಷಿಹೊಂಡ ನಿರ್ಮಿಸಿಕೊಂಡಿದ್ದರೆ; ಬಹಳಷ್ಟು ರೈತರು ಯಾವುದೇ ಕಾಮಗಾರಿ ಆರಂಭಿಸದೇ ಮೀನ– ಮೇಷ ಎಣಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಕಾಮಗಾರಿ ಮಾಡುವಂತೆ ಸೂಚಿಸಿರುವುದಾಗಿ ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.