ADVERTISEMENT

128 ಪೆಟ್ರೋಲ್ ಬಂಕ್ ಬಂದ್

ನಿತ್ಯ ಇಂಧನ ದರ ಪರಿಷ್ಕರಣೆಗೆ ಮಾಲೀಕರ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:06 IST
Last Updated 13 ಜುಲೈ 2017, 10:06 IST

ಹಾಸನ: ಪ್ರತಿನಿತ್ಯ ಇಂಧನ ದರ ಪರಿಷ್ಕರಣೆ ಪದ್ಧತಿ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲಿಯಂ ವಿತರಕರ ಸಂಘ ಬುಧವಾರ ಪೆಟ್ರೋಲ್ ಬಂಕ್‌ಗಳನ್ನು ಬಂದ್‌ ಮಾಡಿದ ಪರಿಣಾಮ ಗ್ರಾಹಕರು ಪರದಾಡಿದರು.

ಜಿಲ್ಲೆಯಲ್ಲಿರುವ ವಿವಿಧ ಕಂಪೆನಿಗಳ 128 ಪೆಟ್ರೋಲ್‌ ಬಂಕ್‌ಗಳನ್ನು  24 ತಾಸು ಬಂದ್‌ ಮಾಡಲಾಗಿತ್ತು.  ಬಂಕ್‌ಗಳ ಎದುರು ವಾಹನಗಳು ಸಾಲು ಕಂಡು ಬಂತು. ಡೀಸೆಲ್‌ ಮತ್ತು ಪೆಟ್ರೋಲ್‌ಗಾಗಿ ಪರದಾಟ ತಪ್ಪಲಿಲ್ಲ. ಆಂಬುಲೆನ್ಸ್‌ ಮತ್ತು ಪೊಲೀಸ್‌ ಇಲಾಖೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.

ವಿತರಕರ ಸಂಘದ ಹಂಗಾಮಿ ಅಧ್ಯಕ್ಷ ಎಚ್.ಮಂಜಪ್ಪ ನೇತೃತ್ವದಲ್ಲಿ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಧರಣಿ ನಡೆಸಿದರು.  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

‘ವಿತರಕರೇ ಪ್ರತಿ ನಿತ್ಯ ಬೆಳಿಗ್ಗೆ 6 ಗಂಟೆಗೆ ದರ ಬದಲಾಯಿಸಬೇಕು. ಹೊಸ ನೀತಿಯಿಂದ ವಿತರಕರು ಸಂಪೂರ್ಣವಾಗಿ ಹೈರಾಣಾಗಿದ್ದು, ಇದರಿಂದ ಉಂಟಾಗುತ್ತಿರುವ ನಷ್ಟವನ್ನು ಸರ್ಕಾರ ಮತ್ತು ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳು ತುಂಬಿಕೊಡಬೇಕು.

ಈ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ವಿತರಕರಿಗೆ ಸುಮಾರು ₹1 ರಿಂದ  ₹ 3 ಲಕ್ಷ ನಷ್ಟ ಉಂಟಾಗುತ್ತಿದೆ. ಜುಲೈ 1ರಂದು ರಾಜ್ಯ ಸರ್ಕಾರ ಶೇ 5 ರಷ್ಟು ಪ್ರವೇಶ ತೆರಿಗೆ ರದ್ದು ಪಡಿಸಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ’ ಎಂದು ಆರೋಪಿಸಿದರು.

ನ್ಯಾಯಮೂರ್ತಿ ಅಪೂರ್ವ ಚಂದ್ರ ಸಮಿತಿ ವರದಿ ಜಾರಿಯಾಗಬೇಕು. ಇಂಧನ ಮಾರಾಟಗಾರರ ಮಾರ್ಜಿನ್ ಹೆಚ್ಚಳ ಮಾಡಬೇಕು ಮತ್ತು ವಿತರಕರಿಗೆ ಮಾಸಿಕ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಬಿ.ಪ್ರದೀಪ್ ಕುಮಾರ, ಕಾರ್ಯದರ್ಶಿ ಬಿ.ಎಸ್.ಭಾಸ್ಕರ್, ಎಚ್.ಆರ್.ವಿನಯ್, ಚನ್ನಕೇಶವ್ ಇದ್ದರು.

***

ಶೇ 2.5 ಕಮಿಷನ್‌ನಲ್ಲಿ ಪೆಟ್ರೋಲ್ ಬಂಕ್‌ ನಿರ್ವಹಣೆ ಮಾಡುವುದು ಕಷ್ಟ.  ಇದರಿಂದ ವಿತರಕರ ನಷ್ಟ ಅನುಭವಿಸುವಂತಾಗಿದೆ
ಎಚ್.ಮಂಜಪ್ಪ, ಪೆಟ್ರೋಲಿಯಂ ವಿತರಕರ ಸಂಘದ ಹಂಗಾಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.