ADVERTISEMENT

2 ತಾಲ್ಲೂಕು ಬಯಲು ಬಹಿರ್ದೆಸೆ ಮುಕ್ತ

ಅ. 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ; ಸಚಿವ ಮಂಜು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:32 IST
Last Updated 17 ಏಪ್ರಿಲ್ 2017, 8:32 IST
ಸಕಲೇಶಪುರ: ಆಲೂರು ಮತ್ತು ಸಕಲೇಶಪುರ ಎರಡೂ ತಾಲ್ಲೂಕುಗಳು ಜಿಲ್ಲೆಯಲ್ಲಿಯೇ ಮೊದಲು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕುಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಭಾನುವಾರ ಇಲ್ಲಿ ಘೋಷಿಸಿದರು. 
 
ಇಲ್ಲಿಯ ಪುರಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಭಾನುವಾರ ಹಮ್ಮಿಕೊಂಡಿದ್ದ ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕು ಘೋಷಣೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
 
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯನ್ನು ನಿಗದಿತ ಅವದಿ ಯೊಳಗೆ ಎರಡೂ ತಾಲ್ಲೂಕುಗಳು ಪೂರ್ಣಗೊಳಿಸಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿ ಪಿಡಿಒಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಶಾಸಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಫಲಾನುಭವಿಗಳ ಸಹಕಾರ ಯೋಜನೆ ಯಶಸ್ವಿಯಾಗಲು ಕಾರಣವಾಗಿದೆ ಎಂದರು.
 
ಸರ್ಕಾರದ ಯೋಜನೆಗಳು ಈ ರೀತಿ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಸ್ಪರ್ಧೆ ಇರಬೇಕು. ಆಗ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿ ಗಳನ್ನು ತಲುಪಿ, ಸರ್ಕಾರದ ಉದ್ದೇಶ ಪೂರ್ಣಗಳ್ಳುತ್ತದೆ ಎಂದರು.   
 
ಅ. 2ರ ಒಳಗೆ ಇಡೀ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು. ಎರಡು ತಿಂಗಳ ಒಳಗೆ ಅರಕಲಗೂಡು ತಾಲ್ಲೂಕು ಸಹ ಬಯಲು ಬಹಿರ್ದೆಸೆ ಮುಕ್ತವಾಗಲಿದೆ ಎಂದು ಹೇಳಿದರು.
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌. ವೆಂಕಟೇಶ್‌ ಮಾತನಾಡಿ, ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ಸುಮಾರು 71 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಅತಿ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಿದ ಮೊದಲ ಜಿಲ್ಲೆ ಹಾಸನ ಎಂದರು. 
 
ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್‌, ತಾ.ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಉಪಾಧ್ಯಕ್ಷ ಯಡೇಹಳ್ಳಿ ಆರ್‌. ಮಂಜುನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಮಂಜುನಾಥ್‌, ಆಲೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರಶೆಟ್ಟಿ, ಜಿ.ಪಂ ಸದಸ್ಯ ಸುಪ್ರದೀಪ್ತ ಯಜಮಾನ್‌, ಉಜ್ಮಾ ರಿಜ್ವಿ, ಉಪ ವಿಭಾಗಾಧಿಕಾರಿ ಪಿ.ಶಿವರಾಜ್‌, ಜಿ.ಪಂ. ಯೋಜನಾ ನಿರ್ದೇಶಕ  ಸಿದ್ದರಾಜು, ತಾ.ಪಂ. ಇಒ ರವಿ ಕುಮಾರ್, ಆಲೂರು ಇಒ ಶಿವಕುಮಾರ್ ಇದ್ದರು.
****
ಬೇಲೂರು ಹಾಗೂ ಹಾಸನ ತಾಲ್ಲೂಕುಗಳಲ್ಲಿಯೂ ಶೇ 100ರಷ್ಟು ಪ್ರಗತಿ ಸಾಧಿಸಿದ್ದು, ಶೀಘ್ರ  ಈ  ತಾಲ್ಲೂಕುಗಳನ್ನು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕುಗಳನ್ನಾಗಿ ಘೋಷಣೆ ಮಾಡಲಾಗುವುದು
ಆರ್‌. ವೆಂಕಟೇಶ್‌, ಜಿಲ್ಲಾ ಪಂಚಾಯಿತಿ  ಸಿಇಒ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.