ADVERTISEMENT

24 ಕೋಟಿ ಬಿಲ್‌ ಬಾಕಿ; ರೇವಣ್ಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:41 IST
Last Updated 11 ನವೆಂಬರ್ 2017, 6:41 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ತಾತ್ಕಾಲಿಕ ಕುಡಿಯುವ ನೀರಿನ ಕಾಮಗಾರಿಗಳಿಗೆ ನೀಡಬೇಕಾದ ಬಿಲ್‌ ಬಾಕಿ ಇರುವ ಬಿಲ್‌ ಮೊತ್ತ ₹ 24 ಕೋಟಿ ಆಗಿದೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು. ಈ ಬಾರಿ ಮಳೆ ಆಶದಾಯಕವಾಗಿದೆ. ಆದರೆ, ಜಿಲ್ಲೆಯ ಬಹುತೇಕ ಕೆರೆಗಳು ತುಂಬಿಲ್ಲ. ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಸೇರಿ 7 ತಾಲ್ಲೂಕುಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

‘ಯಾವುದೇ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಜಿಲ್ಲೆಗೆ ಅಂದಾಜು ₹ 50 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತೇವಾಂಶ ಕೊರತೆಯಿಂದಾಗಿ ತೆಂಗು ಮತ್ತು ಅಡಿಕೆ ಮರಗಳು ನಾಶದಿಂದ ಕೋಟ್ಯಂತರ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಸುಮಾರು ₹ 1,250 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನು ಬೆಳಗಾವಿಯಲ್ಲಿ ನಡೆಯುವ  ಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಎಸಿಬಿ ಮತ್ತು ಲೋಕಾಯುಕ್ತ ನಿಷ್ಕ್ರಿಯವಾಗಿವೆ. ಸುಮಾರು ಮೂರು ಸಾವಿರ ಲೋಡ್‌ ಜೆಲ್ಲಿಯನ್ನು ಜಿಲ್ಲೆಯಿಂದ ಸಾಗಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಸೂಲಿಯಲ್ಲಿ ತೊಡಗಿದ್ದಾರೆ. ಸಿ ನಮೂನೆ ಇಲ್ಲದ ಕಾರಣ ನ್ಯಾಯಾಲಯದಿಂದ ತಡೆ ಆಜ್ಞೆ ಇದ್ದರೂ ಅಕ್ರಮವಾಗಿ ಕಲ್ಲು ಪುಡಿಮಾಡುವ ಘಟಕ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಅಪ್ಪ ಮಕ್ಕಳು ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೇಳುವ ಸಚಿವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ನಮ್ಮ ಅಧಿಕಾರವಧಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಸಚಿವರು ಸುಣ್ಣ ಹೊಡೆಸಿಕೊಂಡು ಇರಲಿ ಸಾಕು’ ಎಂದು ವ್ಯಂಗ್ಯವಾಡಿದರು.

ಯಾರ ಮನೆ ಬಾಗಿಲಿಗೂ ಹೋಗಿಲ್ಲ: ‘ಜಿಲ್ಲಾ ಪಂಚಾಯಿತಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ಅಭಿವದ್ಧಿ ಕೆಲಸಗಳಿಗೆ ಶಾಸಕರು ಅಡ್ಡಿ ಪಡಿಸುತ್ತಿದ್ದಾರೆ ಎಂಬುದು ಸುಳ್ಳು ಆರೋಪ ಎಂದು ಅವರು ಹೇಳಿದರು.

ಅನುದಾನ ನೀಡಿ ಎಂದು ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಜಿಲ್ಲಾ ಪಂಚಾಯಿತಿಗೆ ಬಂದ ₹ 1 ಕೋಟಿ ಹಣದಲ್ಲಿ ₹ 37 ಲಕ್ಷವನ್ನು ಒಂದೇ ಗ್ರಾಮ ಪಂಚಾಯಿತಿಗೆ ಖರ್ಚು ಮಾಡಲಾಗಿದೆ’ ಎಂದು ಆರೋಪಿಸಿದರು.

‘ಎಲ್ಲಿ ಹೋಗಿ ಅನುದಾನ ತರಬೇಕು ಎಂದು ನನಗೆ ಚನ್ನಾಗಿ ತಿಳಿದಿದೆ, ಯಾರು ನನಗೆ ರಾಜಕೀಯ ಹೇಳಿಕೊಡಬೇಕಾಗಿಲ್ಲ. ಜಿಲ್ಲೆಯ ಜನ ಹಿತ ಕಾಪಾಡಲು ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ ಎಂದು’ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್‌ ಅವರಿಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.