ADVERTISEMENT

ಕಟ್ಟಿನಕೆರೆ ಮಾರುಕಟ್ಟೆ ನವೀಕರಣ ಶುರು

ಕೆ.ಎಸ್.ಸುನಿಲ್
Published 22 ಜನವರಿ 2018, 10:00 IST
Last Updated 22 ಜನವರಿ 2018, 10:00 IST
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಅಂಗಡಿ ಮಳಿಗೆಗಳು
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಅಂಗಡಿ ಮಳಿಗೆಗಳು   

ಹಾಸನ: ನಗರದ ಹೃದಯ ಭಾಗದಲ್ಲಿರುವ ಕಟ್ಟಿನಕರೆ ಮಾರುಕಟ್ಟೆಯ ನವೀಕರಣ ಕಾರ್ಯ ಶುರುವಾಗಿದೆ. ಮಾರುಕಟ್ಟೆಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಸರಿಯಾದ ರಸ್ತೆ, ಚರಂಡಿ ಹಾಗೂ ಮಳಿಗೆ ವ್ಯವಸ್ಥೆ ಇರಲಿಲ್ಲ. ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಬೇಕಾಗಿತ್ತು. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗುತ್ತಿತ್ತು.

ಆರಂಭದಲ್ಲಿ ಮಾರುಕಟ್ಟೆ ನವೀಕರಣಕ್ಕೆ ಪರ, ವಿರೋಧ ಕೇಳಿ ಬಂದಿತ್ತು. ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಅಧ್ಯಕ್ಷ ಎಚ್‌.ಎಸ್.ಅನಿಲ್‌ಕುಮಾರ್ ಮಧ್ಯ ಪ್ರವೇಶಿಸಿ ವರ್ತಕರ ಸಭೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು. ಅದರ ಪರಿಣಾಮ ಈಗ ₹ 1 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ ಕೈಗೊಳ್ಳಲಾಗಿದೆ.

ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ ಕಾಮಗಾರಿ ನಡೆಯುತ್ತಿದ್ದು, ತರಕಾರಿ, ಹಣ್ಣು, ಹೂವು ವ್ಯಾಪಾರಿಗಳಿಗೆ ಪ್ಲಾಟ್ ಫಾರ್ಮ್, ಚಾವಣಿ, ಒಳಚರಂಡಿ, ಕಾಂಕ್ರಿಟ್ ರಸ್ತೆ, ಶೌಚಾಲಯ, ಮೆಟ್ಟಿಲು ನಿರ್ಮಿಸಲಾಗುತ್ತಿದೆ.

ADVERTISEMENT

‘ಮಾರುಕಟ್ಟೆ ಅಭಿವೃದ್ಧಿಗೆ ಮೊದಲು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈಗ ಉತ್ತಮ ಕೆಲಸ ಆಗುತ್ತಿರುವುದರಿಂದ ವ್ಯಾಪಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟು 300 ಮಳಿಗೆ ನಿರ್ಮಿಸಲಾಗುತ್ತಿದ್ದು, ಮೊದಲು ವ್ಯಾಪಾರ ಮಾಡುತ್ತಿದ್ದವರಿಗೆ ಆದ್ಯತೆ ನೀಡಲಾಗುವುದು. ಹಾಲಿ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಬಾಡಿಗೆ ನೀಡುತ್ತಿದ್ದಾರೆ’ ಎಂದು ಎಚ್.ಎಸ್. ಅನಿಲ್ ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ಕುರಿತು, ಬಾಳೆಹಣ್ಣು ವರ್ತಕರ ಸಂಘ, ತರಕಾರಿ ವ್ಯಾಪಾರಿಗಳ ಸಂಘ, ಹೂವು ವ್ಯಾಪಾರಿಗಳ ಸಂಘ ಮತ್ತು ಹಣ್ಣು ವ್ಯಾಪಾರಿಗಳ ಸಂಘದ ಜತೆ ಸಭೆ ನಡೆಸಲಾಗಿದೆ. ಮಾರುಕಟ್ಟೆ ಒಳಗೆ ಸಾರ್ವಜನಿಕ ವಾಹನಗಳ ಪ್ರವೇಶ ಕುರಿತು ಮತ್ತೊಮ್ಮೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ ಬೇಸಿಗೆ ಮತ್ತು ಮಳೆಗಾಲದ ಸಂದರ್ಭದಲ್ಲಿ ವ್ಯಾಪಾರ ಮಾಡಲು ತುಂಬಾ ತೊಂದರೆ ಆಗುತ್ತಿತ್ತು. ಮಳೆಗಾಲದಲ್ಲಿ ನೀರು ನಿಂತು ವ್ಯಾಪಾರ ಮಾಡಲು ಆಗುತ್ತಿರಲಿಲ್ಲ. ಮಾರುಕಟ್ಟೆ ಸಂಪೂರ್ಣ ಕೆಸರುಮಯವಾಗಿ ಮಾರುಕಟ್ಟೆಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಹೊಸದಾಗಿ ಮಳಿಗೆ ನಿರ್ಮಿಸುತ್ತಿರುವುದರಿಂದ ಅನುಕೂಲವಾಗಲಿದೆ’ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ಪುಟ್ಟಮ್ಮ.

‘ಚಿಲ್ಲರೆ ವ್ಯಾಪಾರಿಗಳು, ಬೆಳಿಗ್ಗೆಯಿಂದ ಸಂಜೆ ವರೆಗೆ ವ್ಯಾಪಾರ ಮಾಡಿದರೆ ಸ್ವಲ್ಪ ಹಣ ಸಿಗುತ್ತದೆ. ರಸ್ತೆ ಬದಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾದ ಸೂಫಿ ಮತ್ತು ಲಕ್ಷ್ಮಮ್ಮ.

* * 

ನೂತನ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡುವ ಕುರಿತು ವರ್ತಕರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು.
ಎಚ್‌.ಎಸ್‌.ಅನಿಲ್‌ ಕುಮಾರ್‌,
ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.