ADVERTISEMENT

ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:44 IST
Last Updated 20 ಫೆಬ್ರುವರಿ 2018, 9:44 IST

ಅರಕಲಗೂಡು: ಕುಡಿಯುವ ನೀರು ಪೂರೈಸಲು ಆಗ್ರಹಪಡಿಸಿ ತಾಲ್ಲೂಕಿನ ಸಂತೆಮರೂರು ಗ್ರಾಮದ ದಲಿತ ಕಾಲೊನಿಯ ನಿವಾಸಿಗಳು ಸೋಮವಾರ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಖಾಲಿ ಕೊಡಗಳೊಂದಿಗೆ ಬಂದ ಮಹಿಳೆಯರು ಗ್ರಾ.ಪಂ ಕಚೇರಿಯ ಬಾಗಿಲು ಹಾಕಿ ಧರಣಿ ಆರಂಭಿಸಿದರು. ಕಳೆದ ಎರಡು ತಿಂಗಳಿನಿಂದಲೂ ಕಾಲೊನಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದ ಉಳಿದೆಡೆ ನೀರು ಬರುತ್ತಿದೆ. ಆಸುಪಾಸಿನ ಗ್ರಾಮಗಳಿಗೂ ಟ್ಯಾಂಕರ್‌ನಲ್ಲಿ ಪೂರೈಕೆಯಾಗುತ್ತಿದೆ. ಕೇವಲ ದಲಿತ ಕಾಲೊನಿಗೆ ಏಕೆ ನೀರು ವ್ಯತ್ಯಯವಾಗುತ್ತಿದೆ ಎಂದು ಪ್ರಶ್ನಿಸಿದರು.

ADVERTISEMENT

ಪ್ರಶ್ನಿಸಿದರೆ ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಾರೆ. ಒತ್ತಾಯಕ್ಕೆ ಮಣಿದು ಟ್ಯಾಂಕರ್ ಮೂಲಕ ಶಿವರಾತ್ರಿ ದಿನ ಮಾತ್ರ ಒಂದು ದಿನ ನೀರು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಳವೆ ಬಾವಿಗಳ ದುರಸ್ತಿಗೂ ಕ್ರಮ ಕೈಗೊಂಡಿಲ್ಲ. ಜನರು ಪಡಿಪಾಟಲು ಪಡಬೇಕಾಗಿದೆ. ಕೊಡ ನೀರಿಗಾಗಿ ಖಾಸಗಿ ಕೊಳವೆಬಾವಿಯವರ ಹತ್ತಿರ ಬೇಡುವ ಸ್ಥಿತಿ ಇದೆ. ನೀರು ಪೂರೈಕೆ ಸರಿಪಡಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಪಿಡಿಒ ಕೊಠಡಿಗೆ ನುಗ್ಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರು ಪೂರೈಕೆಗೆ ನಿರ್ಲಕ್ಷ ವಹಿಸಿರುವ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು. ನೀರು ಪೂರೈಕೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪಿಡಿಒ ಶಿವಪ್ಪ ಅವರು, ‘ನೀರು ಸರಬರಾಜು ವ್ಯವಸ್ಥೆಯಲ್ಲಿ ತೊಂದರೆ ಇತ್ತು. ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ವ್ಯವಸ್ಥೆ ಮಾಡಲಾಗುವುದು’ ಎಂದರು. ಗ್ರಾಮಸ್ಥರಾದ ವೈಶಾಲಿ, ಭಾಗ್ಯಾ, ಕೇಶವ, ಶಾಂತಾ, ಚನ್ನಯ್ಯ, ರವಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.