ADVERTISEMENT

7 ಆರ್‌ಟಿಒ ವಿರುದ್ಧ ಸಿಬಿಐ ತನಿಖೆ: ಆಗ್ರಹ

ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡ ವಿರುದ್ಧ ಶಾಸಕ ರೇವಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:01 IST
Last Updated 26 ಏಪ್ರಿಲ್ 2018, 11:01 IST

ಹಾಸನ: ‘ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಪಿ.ಮಂಜೇಗೌಡ ಅವರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಮೂಲಕ ಹವಾಲಾ ದಂಧೆಯಲ್ಲಿ ಬಂದ ಹಣವನ್ನು ಮತದಾರರಿಗೆ ಹಂಚುತ್ತಿದ್ದಾರೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

‘ಮಂಜೇಗೌಡ ಅಕ್ರಮವಾಗಿ ಚುನಾವಣೆ ಗೆಲ್ಲಲು, ಕೊಪ್ಪಳದಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿರುವ ಸಹೋದರ ಬಿ.ಪಿ.ಕೃಷ್ಣೇಗೌಡ ಮತ್ತು ಇತರೆ ಹಲವು ಅಧಿಕಾರಿಗಳ ನೆರವಿನಿಂದ ಹೊಳೆನರಸೀಪುರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಹಣ-ಹೆಂಡ ಹಂಚಲಾಗುತ್ತಿದೆ. ದಂಧೆಯಲ್ಲಿ ತೊಡಗಿರುವ ಕೊಪ್ಪಳದ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಕೃಷ್ಣೇಗೌಡ, ವಿಜಯಪುರದ ಮೋಟಾರು ವಾಹನ ನಿರೀಕ್ಷಕ ಸಿ.ಎಂ.ಕೃಷ್ಣೇಗೌಡ, ಬೆಂಗಳೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ಜಳಕಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಆರ್.ಮಂಜುನಾಥ್‌, ಬೆಂಗಳೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ವೈ.ಅಣ್ಣಿಗೇರಿ, ಬಾಗಲಕೋಟೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ವಿ.ಪಿ.ರಮೇಶ್‌, ಬೆಂಗಳೂರಿನ ಮೋಟಾರು ವಾಹನ ನಿರೀಕ್ಷಕ ಎಂ.ರಂಜಿತಾ, ಸಕಲೇಶಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ, ಜಮಖಂಡಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಎಚ್‌.ಸಿ.ಸತ್ಯನ್‌ ಮೇಲೆ ಕಣ್ಣೀಡಬೇಕು ಎಂದು ಕೋರಿ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡಮತ್ತಿಘಟ್ಟ ಗ್ರಾಮದ ಡಿ.ಆರ್‌. ನಾರಾಯಣಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಅಧಿಕಾರಿಗಳ ಆಸ್ತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈಗಾಗಲೇ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ ಮತ್ತು ಹಾಸನ ವಿಧಾನಸಭಾ ಕ್ಷೇತ್ರಗಳು, ಅತಿ ಹೆಚ್ಚು ಹಣ ಖರ್ಚಾಗುವ ಕ್ಷೇತ್ರಗಳು ಎಂದು ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ನೀಡಿದೆ ಎಂದರು.

ADVERTISEMENT

‘ಸಾರಿಗೆ ಇಲಾಖೆಯಿಂದ ಪ್ರತಿ ತಿಂಗಳು ₹ 100 ಕೋಟಿ ಹಣ ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು ₹ 10 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ಕೆಲಸ ಮಾಡಬೇಕಿದ್ದ ಕೃಷ್ಣೇಗೌಡ ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಠಿಕಾಣಿ ಹೂಡುತ್ತಾರೆ. ಪರಿಸ್ಥಿತಿ ಹೀಗಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘10 ವರ್ಷಗಳಿಂದ ಹಾಸನದಲ್ಲಿ ಕಾಯಂ ಆರ್‌ಟಿಒ ಇಲ್ಲ. ಪ್ರಭಾರಿಗಳೇ ಕೆಲಸ ಮಾಡುತ್ತಿದ್ದಾರೆ. ಮಂಜೇಗೌಡ ಸಾರಿಗೆ ಇಲಾಖೆಯನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಶಂಕರ್ ಅವರ ಪ್ರಕೃತಿ ಬಾರ್‌ಗೆ ಮದ್ಯ ಸಾಗಣೆ ಮಾಡಲು ₹ 2 ಕೋಟಿ ಹಣ ನೀಡಲಾಗಿದೆ’ ಎಂದು ದೂರಿದರು.

‘ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಕಾಂಗ್ರೆಸ್‌ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪವಿದ್ದರೂ ಮಂಜೇಗೌಡರ ರಾಜೀನಾಮೆ ಅಂಗೀಕರಿಸುವ ಮೂಲಕ ಉನ್ನತ ಸ್ಥಾನಕ್ಕೆ ಕಳಂಕ ತಂದಿದ್ದಾರೆ. ಅವರು ಹೇಳಿದಂತೆ ಅಧಿಕಾರಿಗಳ ವರ್ಗ ಮಾಡಲಾಗುತ್ತಿದೆ. ಕೂಡಲೇ ಇವರನ್ನು ಬದಲಾವಣೆ ಮಾಡಬೇಕು. ಇಲ್ಲವಾದರೆ ನ್ಯಾಯಸಮ್ಮತ ಚುನಾವಣೆ ನಡೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸ್ ಇಲಾಖೆಯನ್ನು ಕೆಂಪಯ್ಯ ಹಾಗೂ ಕಂದಾಯ ಇಲಾಖೆ ಯನ್ನು ರತ್ನಪ್ರಭ ಹಿಡಿತದಲ್ಲಿ ಟ್ಟುಕೊಂಡಿದ್ದಾರೆ. ಸೇವಾವಧಿಯನ್ನು ಮೂರು ತಿಂಗಳು ಹೆಚ್ಚಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಋಣ ಸಂದಾಯ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಚುನಾವಣೆಯನ್ನು ಪಾರದರ್ಶಕ ವಾಗಿ ನಡೆಸುವಂತೆ ಸಂಸದ ಎಚ್.ಡಿ.ದೇವೇಗೌಡರು ಕೇಂದ್ರ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವರುಣಾದಲ್ಲಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೇ ಬಿಜೆಪಿ ಅಭ್ಯರ್ಥಿ ಎಂದು ಹೇಳ ಲಾಗಿತ್ತು. ಆದರೆ ಸಿ.ಎಂ ಸಿದ್ದರಾ ಮಯ್ಯ ತಮ್ಮ ಮಗನಿಗೆ ತೊಂದರೆ ಯಾಗಲಿದೆ ಎಂದು ಮನವಿ ಮಾಡಿರಬೇಕು. ಈ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡಿಲ್ಲ. ಇದು ಅಡ್ಜಸ್ಟ್ ಮೆಂಟ್ ರಾಜಕೀಯ ಇರಬಹುದು. ಸಿ.ಎಂ ಪುತ್ರನಿಗೆ ಅನುಕೂಲವಾಗಲಿ ಎಂದು ಬಿಜೆಪಿಯವರು ಈಗ ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ’ ಎಂದು ಕಾಂಗ್ರೆಸ್‌ ಹೇಳಿಕೆಗೆ ತಿರುಗೇಟು ನೀಡಿದರು.

ಭ್ರಷ್ಟಾಚಾರವನ್ನು ದೇವಿಯೂ ಕ್ಷಮಿಸಲ್ಲ

ಚಾಮುಂಡೇಶ್ವರಿ ದೇವಿ ಉಗ್ರ ರೂಪ ತಾಳಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬನಶಂಕರಿ ನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ಐದು ವರ್ಷಗಳ ಭ್ರಷ್ಟಾಚಾರವನ್ನು ಆ ದೇವಿಯೂ ಕ್ಷಮಿಸುವುದಿಲ್ಲ. ಹೊಂದಾಣಿಕೆ ಮಾಡಿಕೊಳ್ಳುವುದೇ ಉದ್ದೇಶವಾಗಿದ್ದರೆ ಹೊಳೆನರಸೀಪುರಕ್ಕೆ ಬೇರೆ ಅಭ್ಯರ್ಥಿ ನಿಲ್ಲಿಸಿ ಎಂದು ಕೇಳುತ್ತಿದೆ ಎಂದರು.

ಮಹಿಳಾ ವಿ.ವಿ ಸ್ಥಾಪನೆ: ಭರವಸೆ

ಜೆಡಿಎಸ್ ಸರ್ಕಾರ ಅಧಿಕಾರ ಬಂದರೆ ಹಾಸನದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಕಾಂಗ್ರೆಸ್ ಹಾಗೂ ಬಿಜೆಪಿ ಕಚ್ಚಾಟದಿಂದ ಜಿಲ್ಲೆಗೆ ತಪ್ಪಿದ ಐಐಟಿಯನ್ನು ರಾಜ್ಯ ಸರ್ಕಾರದ ಅನುದಾನದಿಂದಲೇ ತೆರೆಯಲಾಗುವುದು. ಕೇಂದ್ರೀಯ ವಿಶ್ವವಿದ್ಯಾಲಯ, ಹಾಸನ ರೈಲ್ವೆ ಮೇಲ್ಸೇತುವೆ, ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆ ಪರಿಹಾರ, ಆನೆ ಕಾರಿಡಾರ್, ಕುಡಿಯುವ ನೀರಿಗೆ ಸಮರ್ಪಕ ಯೋಜನೆ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಜೆಡಿಎಸ್ ಸರ್ಕಾರ ಜಿಲ್ಲೆಗೆ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.