ADVERTISEMENT

ಇತಿಹಾಸ ತಿರುಚುವ ಪ್ರಯತ್ನ ಸರಿಯಲ್ಲ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 14:44 IST
Last Updated 27 ಜೂನ್ 2023, 14:44 IST
ಹಾಸನದಲ್ಲಿ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಹಾಸನದಲ್ಲಿ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.   

ಹಾಸನ: ‘ಇತಿಹಾಸವನ್ನು ತಿರುಚುವ ಕೆಲಸವನ್ನು ಕೆಲವರ ಮಾಡುತ್ತಾರೆ. ಪಠ್ಯಪುಸ್ತಕದಲ್ಲಿ ಈ ಕೆಲಸ ಆಗಿದ್ದನ್ನು ನೋಡಿದ್ದೇವೆ. ಈಗ ನಾವು ಮತ್ತೆ ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡುತ್ತಿದ್ದೇವೆ. ಇತಿಹಾಸದ ಮೂಲಕ ನಾವು ನಮ್ಮ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514 ನೇ ರಾಜ್ಯಮಟ್ಟದ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಸುಧಾರಕರು ಜಾತಿಗೆ ಸೀಮಿತ ಆಗಬಾರದು. ಸಮಾಜದ ಸ್ವತ್ತಾಗಬೇಕು ಎನ್ನುವ ಉದ್ದೇಶದಿಂದ ಮಹನೀಯರ ಜಯಂತಿ ಆರಂಭಿಸಲಾಗಿತ್ತು. ಕೆಂಪೇಗೌಡರು ಇಡೀ ಏಳು ಕೋಟಿ ಕನ್ನಡಿಗರ ಸ್ವತ್ತು. ಹಾಗಾಗಿ ಸರ್ಕಾರವೇ ಕೆಂಪೇಗೌಡರ ಜಯಂತಿ ಆಚರಣೆ ಮಾಡುತ್ತಿದೆ ಎಂದರು.

ADVERTISEMENT

ಕೆಂಪೇಗೌಡರ ಆಡಳಿತ ಜನಪರ ಹಾಗೂ ಜಾತ್ಯತೀತವಾಗಿತ್ತು. ಕೆರೆಗಳನ್ನು ಕಟ್ಟಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಂಡಿದ್ದರು. ಇಂತಹ ಆಡಳಿತಗಾರ ನಮಗೆಲ್ಲ ಸ್ಫೂರ್ತಿ. ಅದಕ್ಕಾಗಿ ಅವರ ಜಯಂತಿಯನ್ನು ಪ್ರತಿ ವರ್ಷ ಮಾಡಲಾಗುತ್ತದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಜಯಂತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಿಗೆ ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದು ನಮ್ಮ ಸರ್ಕಾರ. ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿದ್ದು ನಾವೇ. ಇದು ಕೆಂಪೇಗೌಡರ 514 ನೇ ಜಯಂತಿ. ಅನೇಕ ಸರ್ಕಾರಗಳು ಬಂದಿದ್ದರೂ, ಕೆಂಪೇಗೌಡರ ಜಯಂತಿ ಆಚರಣೆಗೆ ಮುಂದಾಗಲಿಲ್ಲ. ಆದರೆ, ನಮ್ಮ ಸರ್ಕಾರ 2017 ರಿಂದ ಜಯಂತಿ ಆಚರಣೆ ಪ್ರಾರಂಭಿಸಿತು ಎಂದು ತಿಳಿಸಿದರು.

ಕೆಂಪೇಗೌಡರು ಯಲಹಂಕ ಸಂಸ್ಥಾನದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರಗಳನ್ನು ನಿರ್ಮಾಣ ಮಾಡಿದ್ದಾರೆ. ಇವುಗಳನ್ನು ಬೆಂಗಳೂರಿನ ಹೆಬ್ಬಾಗಿಲುಗಳನ್ನಾಗಿ ಮಾಡುತ್ತಾರೆ. ಕೆಂಪೇಗೌಡರಿಗೆ ದೂರದೃಷ್ಟಿ ಇತ್ತು. ಕನಸು, ದೂರದೃಷ್ಟಿ ಇಲ್ಲದವರು ಒಳ್ಳೆಯ ನಾಡನ್ನು ಕಟ್ಟಲು ಸಾಧ್ಯವಿಲ್ಲ ಎಂದರು.

ಜಾತಿಗೊಂದು ಪೇಟೆ ಮಾಡಲಿಲ್ಲ. ವೃತ್ತಿಗೊಂದು ಪೇಟೆ ಮಾಡಿದರು. ವ್ಯಾಪಾರ, ವಹಿವಾಟಿಗೆ ಅನುಕೂಲ ಮಾಡಿಕೊಟ್ಟರು. ನಾಡು ಬೆಳೆಯಬೇಕಾದರೆ, ಉದ್ಯಮಿ ಬೆಳೆಯಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ತೆರಿಗೆ ಆದಾಯ ಬರುತ್ತದೆ. ಇದರಿಂದ ನಾಡು ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೆಂಪೇಗೌಡರು ಜಾತ್ಯತೀತ ವ್ಯಕ್ತಿ. ಎಲ್ಲ ಜನರನ್ನು ಪ್ರೀತಿಸಿದ ವ್ಯಕ್ತಿ. ಯಲಹಂಕ ಅವರ ಸಂಸ್ಥಾನ. ಅವರ ತಂದೆ ಕೆಂಪನಂಜೇಗೌಡ. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದವರು. ಇಂದು ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದ್ದರೆ, ಅದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಬುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಸಚಿವ ಶಿವರಾಜ ತಂಗಡಗಿ, ಶಾಸಕರಾದ ಹುಲ್ಲಹಳ್ಳಿ ಸುರೇಶ್‌, ಸ್ವರೂಪ್‌ ಪ್ರಕಾಶ್‌ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಲ್ಲೇಶಗೌಡ ಉಪನ್ಯಾಸ ನೀಡಿದರು. ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಸಿಮೆಂಟ್‌ ಮಂಜು, ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಲ್‌ ಮುದ್ದೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಎಸ್ಪಿ ಹರಿರಾಂ ಶಂಕರ್‌ ವೇದಿಕೆಯಲ್ಲಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ ವಂದಿಸಿದರು.

ಕೆಂಪೇಗೌಡರ ಜಯಂತಿ ಅಂಗವಾಗಿ ಹಾಸನ ಹಾಸನಾಂಬ ಕಲಾಕ್ಷೇತ್ರದ ಎದುರು ಆರಂಭವಾದ ಮೆರವಣಿಗೆಗೆ ಸಚಿವರಾದ ಕೆ.ಎನ್‌. ರಾಜಣ್ಣ ಶಿವರಾಜ್‌ ತಂಗಡಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಶಂಭುನಾಥ ಸ್ವಾಮೀಜಿ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಚಾಲನೆ ನೀಡಿದರು.

‘ಗ್ಯಾರಂಟಿ ಅನುಷ್ಠಾನ ಮಾಡಿಯೇ ಸಿದ್ಧ’

ವಿರೋಧಿ ಪಕ್ಷಗಳ ಮಾತಿಗೆ ಗಮನ ಕೊಡಬೇಡಿ. ಜನರಿಗೆ ವಾಗ್ದಾನ ಮಾಡಿದಂತೆ ನಾವು ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸರ್ಕಾರ ಬಂದು ತಿಂಗಳಿಗಿಂತ ಹೆಚ್ಚಾಗಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಶಕ್ತಿ ಯೋಜನೆಯ ಮೂಲಕ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 15 ರ ನಂತರ ಜಾರಿ ಮಾಡಲಾಗುವುದು. 1.28 ಕೋಟಿ ಕುಟುಂಬಗಳಿಗೆ ಯೋಜನೆ ಜಾರಿಗೊಳಿಸಲಾಗುವುದು. ಗೃಹಜ್ಯೋತಿ ಯೋಜನೆ ಜು.1 ರಿಂದ ಜಾರಿಗೆ ಬರಲಿದೆ ಎಂದರು. ಅನ್ನಭಾಗ್ಯದಲ್ಲಿ 7 ಕೆ.ಜಿ. ಅಕ್ಕಿ ಕೊಡಲಾಗುತ್ತಿತ್ತು. ಈಗ ಅದು 5 ಕೆ.ಜಿ.ಗೆ ಇಳಿದಿದೆ. ಈಗ 10 ಕೆ.ಜಿ. ಕೊಡಲು ತೀರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿಯವರು ಬಡವರಿಗೆ ಕೊಡುವ ಅಕ್ಕಿಯಲ್ಲಿ ರಾಜಕಾರಣ ಮಾಡುವ ನೀಚತನ ಮಾಡುತ್ತಿದ್ದಾರೆ. ಏನೇ ಆದರೂ 10 ಕೆ.ಜಿ. ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ. ನಿರುದ್ಯೋಗ ಪದವೀಧರರಿಗೆ ಎರಡು ವರ್ಷ ಭತ್ಯೆ ಕೊಡಲಾಗುವುದು. 2022–23 ರಲ್ಲಿ ಓದಿರುವ ಪದವೀಧರರಿಗೆ ತಿಂಗಳಿಗೆ ₹3 ಸಾವಿರದಂತೆ 24 ತಿಂಗಳು ನೀಡಲಾಗುವುದು ಎಂದು ಹೇಳಿದರು.

‘ಕೆಂಪೇಗೌಡ ಜಯಂತಿ: ಸಿದ್ದರಾಮಯ್ಯಗೆ ಕೀರ್ತಿ’

ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಕೆಂಪೇಗೌಡರ ಜಯಂತಿಯನ್ನು ಸರ್ವಧರ್ಮಿಯರು ಸರ್ವ ಜನಾಂಗದವರು ಆಚರಿಸುವಂತೆ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಅವರು ಮುಖ್ಯಮಂತ್ರಿಯಾಗಿ ಕೆಂಪೇಗೌಡ ಜಯಂತಿ ಆಚರಿಸಲು ಆರಂಭಿಸಿದರು. ಇವತ್ತು ರಾಜ್ಯವಷ್ಟೇ ಅಲ್ಲ ದೇಶದಲ್ಲೇ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ. ಅವರ ಜನ್ಮದಿನಾಚರಣೆ ಸರ್ವರ ಹೃದಯಕ್ಕೆ ತಟ್ಟಿದೆ ಎಂದರು. ಕೆಂಪೇಗೌಡರಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ. ಹಾಸನದಲ್ಲಿ ಕೆಂಪೇಗೌಡ ಜಯಂತಿ ಆಚರಿಸಿ ವಿಶೇಷ ಸ್ಥಾನಮಾನ ನೀಡಿದೆ. ಈ ಜಿಲ್ಲೆ ಹಲವಾರು ವಿಚಾರಗಳಿಗೆ ಪ್ರಸಿದ್ದಿ ಪಡೆದಿದೆ. ಏಕಶಿಲಾಮೂರ್ತಿ ಗೊಮ್ಮಟೇಶ್ವರ ಬಾಹ್ಯಾಕಾಶ ನಿಯಂತ್ರಣ ಕೇಂದ್ರ ಬೇಲೂರು-ಹಳೇಬೀಡು- ಹೊಯ್ಸಳಶ್ವರ ದೇವಾಲಯ ದೇಶಕ್ಕೆ ಪ್ರಧಾನಮಂತ್ರಿಯನ್ನು ನೀಡಿದ ಜಿಲ್ಲೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.