ADVERTISEMENT

ಅಂಗನವಾಡಿ ಕೇಂದ್ರಕ್ಕೆ ‘ಅನಾರೋಗ್ಯ’

ಕುಡಿಯುವ ನೀರಿಗೆ ಪರದಾಟ, ಬಯಲೇ ಶೌಚಾಲಯ, ಕಸದತೊಟ್ಟಿಯೇ ಆಟದ ಮೈದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:33 IST
Last Updated 18 ಫೆಬ್ರುವರಿ 2017, 10:33 IST
ಹಾವೇರಿಯ ಶಿವಾಜಿ ನಗರದ 3ನೇ ಕ್ರಾಸ್‌ನ ಅಂಗನವಾಡಿ ಕೇಂದ್ರ
ಹಾವೇರಿಯ ಶಿವಾಜಿ ನಗರದ 3ನೇ ಕ್ರಾಸ್‌ನ ಅಂಗನವಾಡಿ ಕೇಂದ್ರ   
ಹಾವೇರಿ: ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಾರೆ. ಆದರೆ, ಅದೇ ಮಕ್ಕಳದ ಭವಿಷ್ಯ ರೂಪಿಸುವ ಶೈಕ್ಷಣಿಕ ವ್ಯವಸ್ಥೆಯ ಹೇಗಿದೆ ಎಂಬುದನ್ನು ನೋಡಲು ಶಿವಾಜಿ ನಗರಕ್ಕೆ ಬರಬೇಕು. ಇಲ್ಲಿನ 3ನೇ ಕ್ರಾಸ್‌ನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬೇಕು. 
 
ಇಲ್ಲಿನ ಅಂಗನವಾಡಿಗೆ ಸುಮಾರು 20 ವರ್ಷಗಳಿಂದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನದ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇವೆ. ‘ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳು ಹಾಗೂ ಬಾಲ ಮಂದಿರದ ಐದು ಅನಾಥ ಮಕ್ಕಳು ಇದ್ದಾರೆ.
 
ಮಕ್ಕಳಿಗೆ ಕುಡಿಯಲು ನೀರು ಬೇಕಾದರೆ ಆಯಾ ಪಕ್ಕದ ಮನೆಗಳಿಗೆ ಹೋಗಿ ಬೇಡಿಕೊಂಡು ತರಬೇಕು.  ಇಲ್ಲವೇ ಸಮೀಪದ ಕೊಳವೆಬಾವಿಯಿಂದ ನೀರು ತರಬೇಕು. ಈಗ ಸ್ಥಳೀಯರಿಗೆ ನೀರಿನ ಸಮಸ್ಯೆ ಇದೆ. ಮಕ್ಕಳ ಪರಿಸ್ಥಿತಿ ಹೇಳತೀರದು’ ಎಂದು ಬಸವರಾಜ ಬ್ಯಾಗಡಿ ಹೇಳುತ್ತಾರೆ. 
 
ಆಟದ ಮೈದಾನವೂ ಇಲ್ಲ:ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಅಂಗನವಾಡಿ ಕೇಂದ್ರವೇ  ಅನಾರೋಗ್ಯದಿಂದ ಬಳಲುತ್ತಿದೆ. ಆಟದ ಮೈದಾನವಿಲ್ಲದೇ, ಕಲ್ಲು, ಮುಳ್ಳು, ಗಿಡಗಂಟಿಗಳಿಂದ ಕೂಡಿದ ಸ್ಥಳದಲ್ಲಿ ಮಕ್ಕಳು ಆಟವಾಡುವ ಪರಿಸ್ಥಿತಿ ಇದೆ. ಇಲ್ಲಿ ಒಡೆದ ಗ್ಲಾಸ್‌, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ಹಾಕಲಾಗಿದೆ. ಅಲ್ಲದೇ ಪಾರ್ಥೇನಿಯಂ ಬೆಳೆದಿದೆ. ಕಸದ ತೊಟ್ಟಿಯಲ್ಲಿ ಮಕ್ಕಳು ಶಾಲೆ ಕಲಿಯಬೇಕಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ. 
 
ಆವರಣಗೋಡೆ ಇಲ್ಲ: ಅಂಗನವಾಡಿಗೆ ಇನ್ನೂ ಆವರಣಗೋಡೆ ಇಲ್ಲ. ಇದರಿಂದಾಗಿ ಹಂದಿಗಳ ಹಾಗೂ ವಿಷ ಜಂತುಗಳ ಹಾವಳಿಯ ಮಧ್ಯ ಮಕ್ಕಳು ಕಲಿಯಬೇಕಿದೆ. ಆಟಿಕೆಗಳು ಇಲ್ಲದ ಕಾರಣ ಮಕ್ಕಳು ಕಲ್ಲು, ಕಟ್ಟಿಗೆಗಳಲ್ಲೇ ಆಡಬೇಕಾಗಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಆಟಿಕೆಗಳನ್ನು ನೀಡಬೇಕು ಎಂಬುದು ಪೋಷಕರ ಬೇಡಿಕೆ. 
 
ಅನಾಥ ಮಕ್ಕಳು: ಜಿಲ್ಲಾ ಬಾಲ ಮಂದಿರದ ಮಕ್ಕಳು ಈ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಆದರೆ, ಈ ಅನಾಥ ಮಕ್ಕಳ ಪಾಡು ಇನ್ನಷ್ಟು ದುಸ್ತರವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. 
 
ಶಿಥಿಲಗೊಂಡ ಕಟ್ಟಡ: ಅಂಗನವಾಡಿ ಕಟ್ಟಡಕ್ಕೆ  ಸುಮಾರು 20 ವರ್ಷಗಳಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೆಲ ದಿನಗಳ ಹಿಂದೆ ಸ್ಥಳೀಯ ಯುವಕರು ಸೇರಿ, ಸ್ವತಃ ಖರ್ಚಿನಲ್ಲಿ ಅಂಗನವಾಡಿ ಕೇಂದ್ರದ ಸುತ್ತಲು ಜೆಸಿಬಿಯಿಂದ ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ, ಅಡುಗೆಗಾಗಿ ಕಟ್ಟೆ (ಸ್ಲ್ಯಾಬ್)ಕಟ್ಟಿಸಿಕೊಟ್ಟಿದ್ದಾರೆ.
- ಪ್ರವೀಣ ಸಿ. ಪೂಜಾರ
 
‘ಕ್ರಮಕೈಗೊಳ್ಳಲಾಗುವುದು...’

ಅಂಗವಾಡಿಗಳ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಆವರಣಗೋಡೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್‌.ಮಾಳಗೇರ.

* ಕುಡಿಯುವ ನೀರಿಗಾಗಿ ಅಂಗನವಾಡಿ ಕಾರ್ಯಕರ್ತೆ ಯರು  ಸುತ್ತಲಿನ ಮನೆಗಳಿಗೆ ಹೋಗಿ ಬೇಡುವ ಪರಿಸ್ಥಿತಿ ಇದೆ 
-ಬಸವರಾಜ ಬ್ಯಾಡಗಿ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.