ADVERTISEMENT

ಅಲ್ಪ ನೀರಲ್ಲಿ ಅರಳಿದ ಚೆಂಡು ಹೂ...

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2017, 4:49 IST
Last Updated 27 ಆಗಸ್ಟ್ 2017, 4:49 IST
ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಗ್ರಾಮದ ರೈತ ಸಹೋದರರು ಚೆಂಡು ಹೂ ಕಟಾವಿನಲ್ಲಿ ತೊಡಗಿರುವುದು
ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಗ್ರಾಮದ ರೈತ ಸಹೋದರರು ಚೆಂಡು ಹೂ ಕಟಾವಿನಲ್ಲಿ ತೊಡಗಿರುವುದು   

ಬರಗಾಲ ಎಂಬುದು ಸಾಮಾನ್ಯ ಆಗುತ್ತಿರುವ ಈ ದಿನಗಳಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿಯ ಸಿದ್ಧಪ್ಪ ಕೂನಬೇವು ಮತ್ತು ಚಿಕ್ಕಪ್ಪ ಕೂನಬೇವು ಸಹೋದರರು ತಮ್ಮ ಕುಲಕಸುಬು ಕಂಬಳಿ ನೇಯುವುದನ್ನು ಬಿಟ್ಟು ನೆಲ ಊಳುತ್ತಿದ್ದಾರೆ. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಉತ್ತಮ ಆದಾಯ ಕಂಡಿದ್ದಾರೆ.

‘ಈ ಬಾರಿ ಮುಂಗಾರು ಉತ್ತಮ ಮಳೆ ಆಗಬಹುದು ಎಂದು ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದಿದ್ದೆವು. ಆದರೆ, ಮಳೆ ಕೊರತೆಯ ಕಾರಣ ಬಿತ್ತನೆಯೇ ಮಾಡಲಿಲ್ಲ. ಇರುವ ಸ್ವಲ್ಪ ಕೊಳವೆಬಾವಿ ನೀರನ್ನು ನಂಬಿಕೊಂಡು ಚೆಂಡು ಹೂ, ಈರುಳ್ಳಿ, ತರಕಾರಿ ಬೆಳೆದೆವು’ ಎಂದು ಸಿದ್ಧಪ್ಪ ತಿಳಿಸಿದರು. ಆಳೆತ್ತರ ಬೆಳೆದಿರುವ ಚೆಂಡು ಗಿಡಗಳಲ್ಲಿ ಹೂವು ನಳನಳಿಸುತ್ತಿದ್ದು, ಅವುಗಳನ್ನು ಕಟಾವು ಮಾಡಿ ನಿಗದಿತ ಕಂಪೆನಿಯೊಂದಕ್ಕೆ ಮಾರುತ್ತಾರೆ.

‘ನಮ್ಮದು ಏಳು ಎಕರೆ ಜಮೀನಿದೆ. ಅದರಲ್ಲಿ ಹೈನುಗಾರಿಕೆ, ಕುರಿ–ಕೋಳಿ ಸಾಕಣೆ ಸೇರಿದಂತೆ ಮತ್ತಿತರ ಉಪಕಸುಬುಗಳನ್ನು ಮಾಡುತ್ತಿದ್ದೇವೆ. ಕಂಬಳಿ ನೇಯುವುದು ನಮ್ಮ ವೃತ್ತಿ. ಕೈತುಂಬ ಕೆಲಸವೂ ಇರುತ್ತದೆ. ಆದರೆ, ಇತ್ತೀಚೆಗೆ ಲಾಭ ಕಡಿಮೆಯಾಗಿದ್ದರಿಂದ ನಾವು ಕೃಷಿಯತ್ತ ಗಮನ ಹರಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಒಂದೂವರೆ ಎಕರೆ ಹೊಲದಲ್ಲಿ ಸಂಪೂರ್ಣ ಚೆಂಡು ಹೂ ಬೆಳೆದಿದ್ದೇವೆ. ಅದಕ್ಕೆ ₹10 ಸಾವಿರ ಖಚ್ಚಾಗಿದೆ. ಪ್ರತಿ ವಾರಕ್ಕೆ ಹೂವಿನ ಕಟಾವು ಮಾಡುತ್ತೇವೆ. ₹5.25 ಕೆಜಿ ಹೂವನ್ನು ಒಂದು ಕಂಪೆನಿಗೆ ಕೊಡುತ್ತೇವೆ. ಒಂದು ಟನ್‌ ಹೂ ಕಟಾವಿಗೆ ಐವರು ಕೂಲಿಗಳು ಬೇಕು. ಕೂಲಿ ತೆಗೆದು ಉತ್ತಮ ಲಾಭವೂ ಕೈಸೇರುತ್ತದೆ’ ಎಂದು ಅವರು ವಿವರಿಸಿದರು.

‘ಚೆಂಡು ಹೂವು ಬೆಳೆಯಲು ದೊಡ್ಡ ವೆಚ್ಚದ ಅಗತ್ಯವಿಲ್ಲ. ಕಳೆಯೂ ಬಾಧಿಸುವುದಿಲ್ಲ. ನಿರ್ವಹಣೆಯೂ ಸುಲಭ. ಹೀಗಾಗಿ ಚೆಂಡು ರೈತರಿಗೆ ಉತ್ತಮ ಆದಾಯ ಕೊಡಬಲ್ಲದು. ಕಂಪೆನಿಗಳಿಗೆ ಮಾರಿದರೆ, ವಾರಕ್ಕೊಮ್ಮೆ ಹಣ ಸಿಗುತ್ತದೆ. ವಿವಿಧ ಕಂಪೆನಿಗಳು ಬೀಜ, ಗೊಬ್ಬರ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿ ಮೊದಲೇ ಒಪ್ಪಂದ ಮಾಡಿಕೊಂಡು ವ್ಯಾಪಾರ ಮಾಡುತ್ತಾರೆ’ ಎಂದು ಚಿಕ್ಕಪ್ಪ ಹೇಳಿದರು. ‘ಕಂಪೆನಿಗಳಲ್ಲದೇ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೇ, ಅಲ್ಲಿಯೂ ನೀಡಬಹುದು’ ಎಂದು ಅವರು ಹೇಳಿದರು.

200 ಎಕರೆಯಲ್ಲಿ ಚೆಂಡು ಹೂ ಕೃಷಿ
‘ಈ ಬಾರಿ ತಾಲ್ಲೂಕಿನಲ್ಲಿ 200 ಎಕರೆಗೂ ಹೆಚ್ಚಿನ  ಪ್ರದೇಶದಲ್ಲಿ ರೈತರು ಚೆಂಡು ಹೂ ಬೆಳೆದಿದ್ದಾರೆ. ಮೆಡ್ಲೇರಿ ಮತ್ತು ಕುಪ್ಪೇಲೂರ ಹೋಬಳಿಯಲ್ಲಿ ಹೆಚ್ಚಿನ ರೈತರು ಪುಷ್ಪೋಧ್ಯಮದತ್ತ ಆಸಕ್ತಿ ತೋರುತ್ತಿದ್ದಾರೆ. ಕಡಿಮೆ ನೀರಿನಲ್ಲಿ ಈ ಕೃಷಿ ಮಾಡಬಹುದು.

ಚೆಂಡು ಹೂವಿನಲ್ಲಿ ಫೈರೋತ್ರಾಯಿಡ್‌ ರಸಾಯನಿಕ ಇದ್ದು ಕೀಟನಾಶಕಗಳಲ್ಲಿ ಇದನ್ನು ಹೆಚ್ಚು ಬಳಸುತ್ತಾರೆ. ಬಣ್ಣ, ಔಷಧಿ, ಕೋಳಿ ಆಹಾರದಲ್ಲಿ ಕೂಡ ಬಳಸಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನೂರ್‌ಅಹ್ಮದ್‌ ಹಲಗೇರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.