ADVERTISEMENT

ಈ ಬಾರಿ ಜಿಲ್ಲೆಯಲ್ಲಿ 90 ರೈತರು ಆತ್ಮಹತ್ಯೆಗೆ ಶರಣು

ಹರ್ಷವರ್ಧನ ಪಿ.ಆರ್.
Published 18 ಏಪ್ರಿಲ್ 2017, 5:33 IST
Last Updated 18 ಏಪ್ರಿಲ್ 2017, 5:33 IST
ಈ ಬಾರಿ ಜಿಲ್ಲೆಯಲ್ಲಿ 90 ರೈತರು ಆತ್ಮಹತ್ಯೆಗೆ ಶರಣು
ಈ ಬಾರಿ ಜಿಲ್ಲೆಯಲ್ಲಿ 90 ರೈತರು ಆತ್ಮಹತ್ಯೆಗೆ ಶರಣು   

ಹಾವೇರಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಪೈಕಿ ಈ ಬಾರಿ  (2016–17) ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯಾಗಿವೆ. ಆದರೆ, ಬರ, ಬೆಳೆನಷ್ಟ, ಅಧಿಕ ಬಡ್ಡಿ ಮತ್ತಿತರ ಕಾರಣಕ್ಕೆ ರೈತರು ಆತ್ಮಹತ್ಯೆ ಶರಣಾಗುತ್ತಿರುವುದು ಮಾತ್ರ ನಿಂತಿಲ್ಲ.ಜಿಲ್ಲೆಯಲ್ಲಿ 2003ರಿಂದ 2013ರ ತನಕದ 10 ವರ್ಷಗಳಲ್ಲಿ 132 ರೈತರ ಆತ್ಮಹತ್ಯೆ ಪ್ರಕರಣಗಳು (ಎಫ್‌ಐಆರ್) ದಾಖಲಾಗಿದ್ದರೆ, ದೃಢಪಟ್ಟ 33ಕ್ಕೆ ಸರ್ಕಾರ ಪರಿಹಾರ ನೀಡಿತ್ತು. ಆದರೆ, 2013–14ರ ಒಂದೇ ವರ್ಷದಲ್ಲಿ 135 ಪ್ರಕರಣ ದಾಖಲಾಗಿದೆ.

 2013–14ರ ಬಳಿಕ ರೈತರ ಆತ್ಮಹತ್ಯೆಗಳು ಏರುತ್ತಲೇ ಹೋಗಿದೆ. ಸತತ ಮೂರು ವರ್ಷ ತಲಾ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2013ರಿಂದ2017ರ ನಡುವಿನ ನಾಲ್ಕು ವರ್ಷಗಳಲ್ಲಿ  526 ಪ್ರಕರಣಗಳು ದಾಖಲಾಗಿದ್ದು, 175ರಲ್ಲಿ ಪರಿಹಾರ ನೀಡಲಾಗಿದೆ.ಜಿಲ್ಲೆಯ ಇತಿಹಾಸದಲ್ಲೇ 2015–16 ಸಾಲಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದು, ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಆಗಿತ್ತು. ಹಿರೇಕೆರೂರು, ರಾಣೆಬೆನ್ನೂರು ಹಾಗೂ ಬ್ಯಾಡಗಿ ತಾಲ್ಲೂಕು ವ್ಯಾಪ್ತಿಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಂಡುಬಂದಿದೆ.

ಬದಲಾದ ಪರಿಹಾರ: ಆತ್ಮಹತ್ಯೆ ಮಾಡಿದ ರೈತನ ಕುಟುಂಬಕ್ಕೆ ಈ ಹಿಂದೆ ₹1 ಲಕ್ಷ ಪರಿಹಾರ ನೀಡಲಾಗುತ್ತಿತ್ತು. 2015–16ನೇ ಸಾಲಿನಲ್ಲಿ ₹2 ಲಕ್ಷಕ್ಕೆ ಏರಿಸಲಾಯಿತು. ಕಳೆದ ವರ್ಷ ಈ ಪರಿಹಾರವನ್ನು ₹5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.‘ಅಷ್ಟು ಮಾತ್ರವಲ್ಲ, ಆತ್ಮಹತ್ಯೆ ಮಾಡಿಕೊಂಡವರು ‘ರೈತರು’ ಎಂದು ದೃಢೀಕರಿಸಲು ಬೇಕಾದ ದಾಖಲೆಗಳ ಪಟ್ಟಿಯನ್ನೂ ಪರಿಷ್ಕರಿಸಲಾಗಿದೆ. ಕೃಷಿ ಕಾರ್ಮಿಕರನ್ನೂ ಪರಿಗಣಿಸಲು ಅವಕಾಶ ಸಿಕ್ಕಿದೆ. ಹೀಗಾಗಿ, ತಿರಸ್ಕೃತಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆಗಳೂ ಕಡಿಮೆಯಾಗಿವೆ. ಜೊತೆಗೆ ಮೃತ ರೈತರ ಕುಟುಂಬಕ್ಕೆ ಉದ್ಯೋಗ, ಮಕ್ಕಳಿಗೆ ಶಿಕ್ಷಣದ ಸೌಲಭ್ಯವನ್ನೂ ನೀಡಲಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ADVERTISEMENT

‘ರೈತರಿಗೆ ಸಾಲಬಾಧೆಯ ಒತ್ತಡ ಹೆಚ್ಚುತ್ತಿದೆ. ಈ ಪೈಕಿ ಅಧಿಕ ಬಡ್ಡಿ, ಸಾಲ ಮರುಪಾವತಿಗೆ ಒತ್ತಡ, ಖಾಸಗಿ ಹಣ­ಕಾಸು ಸಂಸ್ಥೆಗಳ ಕಿರಿಕಿರಿ, ಮೀಟರ್‌ ಬಡ್ಡಿ, ಮೈಕ್ರೋ ಫೈನಾನ್ಸ್‌ ಹಾವಳಿಬಗ್ಗೆ ಹಲವಾರು ರೈತರು ದೂರಿಕೊಳ್ಳುತ್ತಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.‘ರೈತರ ಆತ್ಮಹತ್ಯೆಗೆ ಬರ, ಬೆಳೆನಷ್ಟ, ಅಧಿಕ ಬಡ್ಡಿ, ಮಾನಸಿಕ ಕಿರುಕುಳ, ಒತ್ತಡ, ಅಧಿಕಾರಿಗಳ ಧೋರಣೆ, ಸಿಗದ ಪರಿಹಾರ, ವಂಚನೆ ಮತ್ತಿತರ ಹಲವಾರು ಕಾರಣಗಳಿವೆ. ರೈತರು ಏಕಾಏಕಿ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಹಲವು ವರ್ಷಗಳಿಂದ ನೊಂದುಕೊಂಡು ಬಂದಿರುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಚಿಂತಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯಿಸಿದರು.

‘ರೈತರ ಆತ್ಮಹತ್ಯೆ ಪ್ರಕರಣಗಳ ‘ಸಂಖ್ಯೆ’ ಇಳಿಕೆಯಾಗಿದೆ ಎಂದ ಮಾತ್ರಕ್ಕೆ ಎಲ್ಲರೂ ನಿಟ್ಟುಸಿರು ಬಿಡುವಂತಿಲ್ಲ. ಅದು ಶೂನ್ಯ ಆಗಬೇಕು’ ಎಂದರು. ‘ಕೃಷಿ ಅಭಿಯಾನದಡಿ ರೈತರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ನೀಡುವ, ಆತ್ಮಸ್ಥೈರ್ಯ ತುಂಬಲು ಬೇಕಾದ ಕ್ರಮಗಳನ್ನು ಮಾಡುತ್ತಿದ್ದೇವೆ’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ರಾಜಶೇಖರ ಬಿಜಾಪುರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.