ADVERTISEMENT

‘ಎಲ್ಲ ರಂಗದಲ್ಲಿ ಪ್ರತಿಭೆ ಮೆರೆಯುತ್ತಿರುವ ಮಹಿಳೆ’

ಶತಮಾನಗಳ ದಾಸ್ಯದಿಂದ ಹೊರಬಂದ ಮಹಿಳೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:11 IST
Last Updated 9 ಮಾರ್ಚ್ 2017, 11:11 IST
ಹಾನಗಲ್: ‘ಶತಮಾನಗಳ ದಾಸ್ಯದಿಂದ ಹೊರಬಂದ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಭೆಯ ಮೂಲಕ ಮಾನ್ಯತೆ ಸಾಧಿಸುತ್ತಿದ್ದಾಳೆ’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರಳಾ ಜಾಧವ ಹೆಮ್ಮೆ ವ್ಯಕ್ತಪಡಿಸಿದರು.
 
ಇಲ್ಲಿನ ಲೊಯೋಲಾ ವಿಕಾಸ ಕೇಂದ್ರದಲ್ಲಿ ಬುಧವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹೆಣ್ಣು ಹುಟ್ಟಿತು ಎಂದು ವೇತನ ಪಡುವ ಕಾಲವೀಗ ಬದಲಾಗಿದೆ. ಹೆಣ್ಣು ಹುಟ್ಟಿದ ಮನೆ ನೆಮ್ಮದಿಯಾಗಿರುತ್ತದೆ ಎನ್ನುವ ಮನಸ್ಥಿತಿ ಏರ್ಪಟ್ಟಿದೆ. ಮಹಿಳೆ ಯರು ಸಂಘಟಿತರಾಗಬೇಕಿದೆ. ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವ ಮಾತು ಸುಳ್ಳಾಗ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
 
ಮುಂಡಗೋಡ ಮತ್ತು ಹಾನಗಲ್‌ ಲೊಯೋಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಫಾ.ಫ್ರಾನ್ಸಿಸ್‌ ಮೆನೆಜಸ್‌ ಮಾತನಾಡಿ, ‘1914ರಲ್ಲಿ ಪ್ರಥಮ ಬಾರಿಗೆ ಮಹಿಳಾ ದಿನಾಚರಣೆಯನ್ನು ಆರಂಭಿಸಲಾಯಿತು. ಈ ದಿನಾಚರಣೆಗೆ 1975ರಲ್ಲಿ ವಿಶ್ವ ಮಾನ್ಯತೆ ಸಿಕ್ಕಿತು’ ಎಂದ ಅವರು, ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಸಮಾನ ಅವಕಾಶ ಸಿಗಬೇಕು ಎನ್ನುವ ಈ ಸಮಯದಲ್ಲಿಯೂ ಮಹಿಳೆ ಅಸುರಕ್ಷಿತ ಭಾವದಲ್ಲಿದ್ದಾಳೆ ಎಂದು ಖೇದ ವ್ಯಕ್ತಪಡಿಸಿದರು.
 
ಪ್ರಗತಿ ಲೊಯೋಲಾ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಭಾರತಿ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಸಿಂಡಿಕೇಟ್‌ ಬ್ಯಾಂಕ್‌ ಶಾಖಾಧಿಕಾರಿ ಮಾಧುರಿ ಪಾಡಕೆ, ಪೊಲೀಸ್‌ ಇಲಾಖೆಯ ರೇಣುಕಾ ಪವಾರ, ತಾಲ್ಲೂಕು ಪಂಚಾಯ್ತಿಯ ರಾಧಾ ಹುಳ್ಳೇರ, ಪ್ರಗತಿ ಲೊಯೋಲಾ ಒಕ್ಕೂಟದ ಸದಸ್ಯೆ ಖುಸ್ನುದಾ ಬೇಪಾರಿ ವೇದಿಕೆಯಲ್ಲಿದ್ದರು.
 
ನಾಗರತ್ನಾ ನೆಗಳುರ ಸ್ವಾಗತಿಸಿದರು. ಗೀತಾ ಪೂಜಾರ ನಿರೂಪಿಸಿದರು. ಇದಕ್ಕೂ ಮುನ್ನ ಇಲ್ಲಿನ ತಾಲ್ಲೂಕು ಪಂಚಾಯ್ತಿ ಆವರಣದಿಂದ ಹೊರಟ ಮಹಿಳೆಯರ ಜಾಥಾದಲ್ಲಿ ಲೊಯೋಲಾ ವಿಕಾಸ ಕೇಂದ್ರದ ಅಡಿಯಲ್ಲಿನ 102 ಮಹಿಳಾ ಸ್ವ–ಸಹಾಯ ಸಂಘಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.