ADVERTISEMENT

‘ಎಲ್ಲ ವೃತ್ತಿಗೂ ಗೌರವ ತಂದುಕೊಟ್ಟ ಬಸವಣ್ಣ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:26 IST
Last Updated 17 ಮೇ 2017, 7:26 IST

ಶಿಗ್ಗಾವಿ: ‘ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಎಂಬ ವೈಚಾರಿಕ ಅಂಶಗಳನ್ನು ಸಮಾಜಕ್ಕೆ ನೀಡುವ ಮೂಲಕ ಬಸವಣ್ಣವರು ಎಲ್ಲ ವೃತ್ತಿಗೂ ಗೌರವ ತಂದುಕೊಟ್ಟ ಮಹಾಪುರುಷ’ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಾಂತಿನಾಥ ದಿಬ್ಬದ ಹೇಳಿದರು.

ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಬಸವಣ್ಣವರ ಜಯಂತ್ಯುತ್ಸವ ಅಂಗವಾಗಿ ನಡೆದ  ‘ಬಸವಣ್ಣವರ ವೈಚಾರಿಕತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ವೃತ್ತಿಗೂ ಸಮನವಾದ ಗೌರವ ಸಲ್ಲಬೇಕು. ಕಾಯಕವೇ ಕೈಲಾಸ, ಕಾಯಕ ನಿರತವಾಗಿರುವುದೆ ನಿಜವಾದ ಧರ್ಮ ಎಂಬುದು ಬಸವಣ್ಣನವರ ಪ್ರತಿಪಾದನೆ. ಬಸವಣ್ಣವರ ವಚನಗಳು ಸಾಮಾಜಿಕವಾಗಿ, ಸಾಹಿತ್ಯಾತ್ಮಕವಾಗಿ ಹಾಗೂ ಪ್ರಜಾಪ್ರಭುತ್ವದ ನೆಲೆ ಸೇರಿದಂತೆ ಹಲವು ಆಯಾಮಗಳಲ್ಲಿ ಅಧ್ಯಯನವಾಗಿದೆ. ಇನ್ನು, ಮನೋವೈಜ್ಞಾನಿಕ ನೆಲೆಯಲ್ಲಿ ಅಧ್ಯಯನವಾಗಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಅಲ್ಲದೇ, ‘ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪರಾಧ. ವಚನಗಳ ಮೂಲಕ ವೈಚಾರಿಕತೆ ಪಸರಿಸಿದ ಬಸವಣ್ಣ ಅವರು, ಒಬ್ಬ ಆರ್ಥಿಕ ತಜ್ಞ, ಸಮಾಜಶಾಸ್ತ್ರಜ್ಞ, ರಾಜಕೀಯ ಚಿಂತಕ, ಹಾಗೂ ಮನೋವಿಜ್ಞಾನಿಯಾಗಿದ್ದರು’ ಎಂದರು.

ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಡಿ.ಬಿ.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಾಗತಿಕ ಕ್ರಾಂತಿಗಳಲ್ಲಿ ಬಹುತೇಕ ರಾಜಕೀಯ ಹಿತಾಸಕ್ತಿಗೆ ನಡೆದಿವೆ. ಆದರೆ, 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಬದಲಾವಣೆಗೆ ಕ್ರಾಂತಿ ಮಾಡಿದರು. ಬಸವಣ್ಣನವರ ವಚನಗಳು 23 ಭಾಷೆಯಲ್ಲಿ ಅನುವಾದಗೊಂಡಿದ್ದು, ಅವರ ವೈಚಾರಿಕ ಅಂಶಗಳು ಜಗತ್ತನ್ನೆ ತಲುಪಲಿವೆ’ ಎಂದರು.

ಇದೇ ವೇಳೆ, ‘ಬಸವಣ್ಣನವರ ವಿಚಾರಧಾರೆಗಳ ಮತ್ತು ಪ್ರಸ್ತುತತೆ’ ವಿಷಯ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದೇವೆಂದ್ರ ಮಾಳಗಿ, ಶ್ರೀದೇವಿ ಹನಗೋಡಿಮಠ ಪ್ರವೀಣ ಅವರಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಕುಲಸಚಿವ ಶಹಜಾಹಾನ್ ಮುದಕವಿ ಇದ್ದರು. ಕಲಾವಿದ ಮೋಹನ ಕುಮಾರ ಪ್ರಾರ್ಥಿಸಿದರು. ಶಿವಕುಮಾರ ಸಿರಿಗೇರಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಭಿನಯ ನಿರೂಪಿಸಿದರು.

*

ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪರಾಧ
ಪ್ರೊ.ಶಾಂತಿನಾಥ ದಿಬ್ಬದ
ವಿಶ್ರಾಂತ ಪ್ರಾಧ್ಯಾಪಕ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.