ADVERTISEMENT

ಕಂಬಳಿಯು ಜಾತ್ಯತೀತದ ಸಂಕೇತ

ಟೆಕ್ಸ್‌ಟೈಲ್‌ಮಿಲ್‌ ಉದ್ಘಾಟನೆ; ಕಾಗಿನೆಲೆ ಪೀಠದ ನಿರಂಜನಾನಂದ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:29 IST
Last Updated 20 ಫೆಬ್ರುವರಿ 2017, 6:29 IST

ರಾಣೆಬೆನ್ನೂರು: ‘50 ವರ್ಷಗಳಿಂದ ಈ ಘಟಕ ಅಭಿವೃದ್ಧಿ ಕಾಣದೇ ನೆನೆಗುದಿಗೆ ಬಿದ್ದಿತ್ತು. ಈಗ ನಮ್ಮ ಸರ್ಕಾರ ಅನುದಾನ ನೀಡಿ ಜೀವ ತುಂಬಿದೆ. ಪ್ರಧಾನಿ ಇಂದಿರಾ ಅವರಿಂದ ಹಿಡಿದು ಎಲ್ಲ ಮುಖ್ಯಮಂತ್ರಿಗಳು ಬಂದು ಹೋದರೂ ಏನೂ ಪ್ರಯೋಜನವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ₹ 7.5 ಕೋಟಿ ಅನುದಾನ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಉಣ್ಣೆ ನೂಲು ಮತ್ತು ಬ್ಲ್ಯಾಂಕೆಟ್ ತಯಾರಿಕ ಘಟಕ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಕುರಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿ ಗೆಯ ಸಹಕಾರಿ ಸಂಘದ ವಜ್ರಮಹೋತ್ಸವ’ ಸಮಾರಂಭ  ಮಾತನಾಡಿದರು.

ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಒಟ್ಟು ಸಾಲದ ಅರ್ಧಷ್ಟನ್ನು ಮನ್ನಾ ಮಾಡಲು ಮುಂದಾಗಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ’ ಎಂದು ದೂರಿದರು.

‘ಹಾವೇರಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಕೂಡಲೇ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿಯೇ ರಾಣೆಬೆನ್ನೂರು ದೊಡ್ಡದು. 1.30 ಲಕ್ಷ ಜನಸಂಖ್ಯೆ ಹೊಂದಿದೆ. ನಗರದ ಸುತ್ತಲೂ ವರ್ತುಲ ರಸ್ತೆ ನಿರ್ಮಾಣ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಯನ್ನು 300 ಬೆಡ್‌ಗೆ ಪರಿವರ್ತನೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ‘ನಾಡಿನ ಅನೇಕ ಮಠಾಧೀಶರು ವಿವಿಧ ಪ್ರಾಣಿಗಳ ಚರ್ಮ ಬಳಸಿ ಅದರ ಮೇಲೆ ಆಸೀನರಾಗುತ್ತಾರೆ. ಅವರು ಸತ್ತ ಪ್ರಾಣಿ ಮೇಲೆ ಕುಳಿತು ಪೀಠ ಅಲಂಕರಿಸಿದಂತೆ’ ಎಂದು ಟೀಕಿಸಿದರು.

‘ಮೈಲಾರ ಲಿಂಗ, ರೇವಣಸಿದ್ಧರು ಮತ್ತು ಬೀರಲಿಂಗೇಶ್ವರ ದೇವರು ಕಂಬಳಿ ಮೇಲೆ ಆಸೀನರಾಗಿದ್ದಾರೆ. ಕನಕದಾಸರು ಕೂಡ ಕಂಬಳಿ ಹೊತ್ತು ಸಾಗಿದ್ದಾರೆ. ಮನುಷ್ಯ ತೊಟ್ಟ ಎಲ್ಲ ವಸ್ತ್ರಗಳು ಮೈಲಿಗೆಯಾಗುತ್ತವೆ. ಆದರೆ ಯಾವುದೇ ಮೈಲಿಗೆಯಾಗದ ವಸ್ತು ಕಂಬಳಿ, ಮೈಲಿಗೆ ರಹಿತ ವಸ್ತು ಕಂಬಳಿ. ಕಂಬಳಿ ಇಲ್ಲದ ಮನೆ ಇಲ್ಲ. ಕಂಬಳಿ ಜಾತ್ಯತೀತದ ಸಂಕೇತ’ ಎಂದರು.

‘ಈ ಭಾಗದ ಜನತೆ ಮತ್ತು ಕುರಿಗಾರರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ತೊಂದರೆಯಾಗದಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಮನೋಹರ ತಹಶೀ ಲ್ದಾರ್, ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ಜಿ.ಪಂ.ಅಧ್ಯಕ್ಷ ಕೊಟ್ರೇಶ ಬಸೇಗಣ್ಣಿ,  ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.