ADVERTISEMENT

ಕನಿಷ್ಠ ವೇತನ ನೀಡಿ, ಖಾಸಗೀಕರಣ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:07 IST
Last Updated 21 ಜನವರಿ 2017, 6:07 IST
ಕನಿಷ್ಠ ವೇತನ ನೀಡಿ, ಖಾಸಗೀಕರಣ ಕೈಬಿಡಿ
ಕನಿಷ್ಠ ವೇತನ ನೀಡಿ, ಖಾಸಗೀಕರಣ ಕೈಬಿಡಿ   

ಹಾವೇರಿ: ಕೇಂದ್ರ ಸರ್ಕಾರ ಘೋಷಿಸಿರುವ ತಿಂಗಳ ಕನಿಷ್ಠ ವೇತನ ₹18 ಸಾವಿರ ನೀಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ ಸಂಯೋಜಿತ) ಸದಸ್ಯರು ಶುಕ್ರವಾರ ನಗರದಲ್ಲಿನ ಲೋಕಸಭಾ ಸದಸ್ಯರ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಉದ್ದೇಶಿಸಿ ಮಾತನಾಡಿದ ಫೆಡರೇಷನ್‌ ಜಿಲ್ಲಾ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ‘ಐಸಿಡಿಎಸ್ ಯೋಜನೆಯು ದೇಶದಲ್ಲಿ ಜಾರಿಗೆ ಬಂದು 41 ವರ್ಷಗಳು ಕಳೆದಿವೆ. ರಾಜ್ಯದಲ್ಲಿ ಯೋಜನೆ ಯಶಸ್ವಿಯಾಗಿದೆ. ಬಡ ಗರ್ಭಿಣಿ, ಬಾಣಂತಿ, ತಾಯಂದಿರು, 6 ವಯೋಮಾನದೊಳಗಿನ ಮಕ್ಕಳು ಹಾಗೂ ಕಿಶೋರಿಯ ಸೇವೆಯಲ್ಲಿ ಈ ಮಹಿಳಾ ಸಿಬ್ಬಂದಿ ತೊಡಗಿದ್ದಾರೆ. ಈ ಯೋಜನೆಯು ಕಾಯಂ ಸ್ವರೂಪದ್ದಾಗಿದೆ. ಆದರೆ, ಈ ಸಿಬ್ಬಂದಿಯನ್ನು ಮಾತ್ರ ಸರ್ಕಾರಗಳು ಕಾಯಂ ಮಾಡದೇ ಇರುವುದು ವಿಪರ್ಯಾಸ. ಸೇವೆ ನೀಡುವವರ ಬದುಕೇ ದುಸ್ತರವಾಗಿದೆ’ ಎಂದರು.

‘ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಮಹಿಳೆಯರೇ ಸೇವೆ ಸಲ್ಲಿಸುವ ಅನನ್ಯ ಯೋಜನೆ ಇದಾಗಿದೆ. ಆದರೆ, ಸರ್ಕಾರಗಳ ನಿರ್ಲಕ್ಷ್ಯವು ಪರೋಕ್ಷವಾಗಿ ಮುಂದಿನ ತಲೆಮಾರಿನ ಮಕ್ಕಳ ಆರೋ ಗ್ಯ– ಭವಿಷ್ಯದ ಮೇಲೆ ದುಷ್ಪರಿ ಣಾಮ ಬೀರುತ್ತದೆ. ಈ ಬಾರಿ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಮಹಿಳಾ ವಿರೋಧಿ’ ಹಣೆಪಟ್ಟಿ ಪಡೆಯ ಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರಿ ನೌಕರರಿಗೆ ತಿಂಗಳ ಕನಿಷ್ಠ ವೇತನ ₹ 18 ಸಾವಿರ ಘೋಷಣೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಕನಿಷ್ಠ ₹10,400 ನಿಗದಿಪಡಿಸಲಾಗಿದೆ.  ಆದರೆ, ಇದಕ್ಕಿಂತಲೂ ಕಡಿಮೆ ಗೌರವಧನ ನೀಡಲಾಗುತ್ತಿದೆ. ಅಲ್ಲದೇ, ಯಾವುದೇ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. 

ಸಚಿವರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆಯನ್ನು ಶ್ಲಾಘಿಸಿದರು. ಬಳಿಕ ಮಾತನಾಡಿ, ‘ಒಂದು ವಾರದಲ್ಲಿ ಮುಖ್ಯಮಂತ್ರಿ ಜೊತೆ ಭೇಟಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಫೆಡರೇಷನ್‌ನ  ಜಿ.ಡಿ.ಪೂಜಾರ, ಸುನಿತಾ ಮರಕಳ್ಳಿ, ನೀಲಮ್ಮ ವಾಲಿ, ಪಾರ್ವತೆಮ್ಮ ಹಾರ್ದಿಹಳ್ಳಿ, ಲಲಿತಾ ನಾಗನಗೌಡ್ರ, ಗಂಗಮ್ಮ ಅಣ್ಣಿಗೇರಿ, ಸುನಂದಮ್ಮ ರೇವಣ್ಣಕರ, ಭಾರತಿ ಹಿರೇ ಮಠ, ಯಲ್ಲಮ್ಮ ಮರಡೂರ, ಜಯಮ್ಮ ದೇಸಳ, ಲಲಿತಮ್ಮ ಪಾಟೀಲ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.